ADVERTISEMENT

ಕೆ.ಎಲ್. ರಾಹುಲ್‌ಗೆ ಭಾರತ ಟೆಸ್ಟ್ ತಂಡದ ನಾಯಕನ ಹೊಣೆ ನೀಡಬೇಕು: ಸಂಜಯ್ ಜಗದಾಳೆ

ಪಿಟಿಐ
Published 17 ಜನವರಿ 2022, 13:29 IST
Last Updated 17 ಜನವರಿ 2022, 13:29 IST
ಕೆ.ಎಲ್. ರಾಹುಲ್: ಎಎಫ್‌ಪಿ ಚಿತ್ರ
ಕೆ.ಎಲ್. ರಾಹುಲ್: ಎಎಫ್‌ಪಿ ಚಿತ್ರ   

ಇಂದೋರ್‌: ಆರಂಭಿಕ ಬ್ಯಾಟರ್ ಕೆ.ಎಲ್‌.ರಾಹುಲ್ ಅವರಿಗೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪಟ್ಟ ಅಲಂಕರಿಸುವ ಅರ್ಹತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಕಾರ್ಯದರ್ಶಿ ಸಂಜಯ್‌ ಜಗದಾಳೆ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯಾಗಿರುವ ಸಂಜಯ್‌ ಸೋಮವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿ ತಂಡವನ್ನು ದೀರ್ಘ ಕಾಲ ಯಶಸ್ವಿಯಾಗಿ ಮುನ್ನಡೆಸಲು ರಾಹುಲ್ ಸಾಧ್ಯವಿದೆ ಎಂದು ಹೇಳಿದರು.

ಏಳು ವರ್ಷ ಭಾರತ ತಂಡದ ನಾಯಕತ್ವವನ್ನು ನಿರ್ವಹಿಸಿದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಸೋಲಿನ ನಂತರ ಕಳೆದ ಶನಿವಾರ ದಿಢೀರ್‌ ಆಗಿ ನಾಯಕತ್ವ ತೊರೆದಿದ್ದರು. ಒಟ್ಟು 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕೊಹ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯ ಹೊಂದಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾ ಸರಣಿಯ ಮಧ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದ್ದಾಗ ಕೊಹ್ಲಿ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ADVERTISEMENT

‘ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಜವಾಬ್ದಾರಿ ಹೊರಲು ಸಾಧ್ಯ ಇರುವವರಿಗೆ ಮಾತ್ರ ಮುಂದಿನ ನಾಯಕತ್ವದ ಹೊಣೆ ನೀಡಬೇಕು. ಈ ದೃಷ್ಟಿಯಲ್ಲಿ ಯೋಚಿಸಿದರೆ ಕೆ.ಎಲ್‌.ರಾಹುಲ್ ಸೂಕ್ತ ಆಯ್ಕೆ’ ಎಂದು ಜಗದಾಳೆ ಹೇಳಿದರು.

ಮುಂದಿನ ನಾಯಕ ಯಾರು ಎಂದು ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ರೋಹಿತ್ ಶರ್ಮಾ ಅವರನ್ನು ಉಪನಾಯಕನ್ನಾಗಿ ಮಾಡಲಾಗಿತ್ತು. ಆದರೆ ಅವರು ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿರಲಿಲ್ಲ. ಎರಡನೇ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾಗ ರಾಹುಲ್ ತಂಡವನ್ನು ಮುನ್ನಡೆಸಿದ್ದರು.

ನಾಯಕತ್ವಕ್ಕೆ ನಾನು ಸಿದ್ಧ: ಬೂಮ್ರಾ

ಪರ್ಲ್‌, ದಕ್ಷಿಣ ಆಫ್ರಿಕಾ: ತಂಡವನ್ನು ಮುನ್ನಡೆಸುವ ಅವಕಾಶ ನೀಡಿದರೆ ನಿರಾಕರಿಸಲಾರೆ. ಭಾರತ ತಂಡದ ನಾಯಕನಾಗುವುದೆಂದರೆ ಅದೃಷ್ಟವೇ ಸರಿ ಎಂದು ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಾಯಕತ್ವದ ಹೊಣೆ ವಹಿಸಿದರೆ ಬೇಡ ಎನ್ನಲು ಯಾವ ಆಟಗಾರನಿಗೂ ಸಾಧ್ಯವಿಲ್ಲ. ಅದರಿಂದ ನಾನೇನು ಭಿನ್ನವಲ್ಲ. ಅವಕಾಶ ಲಭಿಸಿದರೆ ತಂಡದ ಶ್ರೇಯಸ್ಸಿಗಾಗಿ ಶಕ್ತಿಮೀರಿ ಪ್ರಯತ್ನಿಸುವೆ’ ಎಂದರು.

ಏಕದಿನ ಸರಣಿಗೆ ಸಜ್ಜಾಗುತ್ತಿರುವ ರೋಹಿತ್

ನವದೆಹಲಿ: ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಬಹುತೇಕ ಚೇತರಿಸಿಕೊಂಡಿದ್ದು ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸುವ ಕೆಲವೇ ದಿನಗಳಿಗೆ ಮೊದಲು ಅಭ್ಯಾಸದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆದ್ದರಿಂದ ತಂಡದೊಂದಿಗೆ ತೆರಳಲು ಸಾಧ್ಯವಾಗಿರಲಿಲ್ಲ.

ಇದೇ 19ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲೂ ಅವರು ಆಡುವುದಿಲ್ಲ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿರುವ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಫೆಬ್ರುವರಿ ಆರರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದ ವೇಳೆ ಸಂಪೂರ್ಣ ಫಿಟ್‌ ಆಗಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಲಾ ಮೂರು ಏಕದಿನ ಮತ್ತು ಟ್ವೆಂಟಿ20 ಪಂದ್ಯಗಳನ್ನು ಆಡಲಿದೆ. ಆರರಿಂದ 12ರ ವರೆಗೆ ಏಕದಿನ ಸರಣಿ, 15ರಿಂದ 20ರೆ ವರೆಗೆ ಟ್ವೆಂಟಿ20 ಸರಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.