ವಡೋದರಾ: ಭಾರತ ತಂಡಕ್ಕೆ ಮರಳುವ ಕನಸು ಕಾಣುತ್ತಿರುವ ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಮತ್ತು ಕೃಣಾಲ್ ಪಾಂಡ್ಯ ನೇತೃತ್ವದ ಬರೋಡಾ ತಂಡಗಳು ಶನಿವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತು ವೇಗಿ ಪ್ರಸಿದ್ಧ ಕೃಷ್ಣ ಅವರು ಆಸ್ಟ್ರೇಲಿಯಾದಿಂದ ಮರಳಿದ್ದು, ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. ಇದರಿಂದಾಗಿ ಮಯಂಕ್ ಬಳಗದ ಬಲ ಹೆಚ್ಚಿದೆ.
ಸಿ ಗುಂಪಿನಲ್ಲಿ 24 ಅಂಕ ಗಳಿಸಿದ್ದ ಕರ್ನಾಟಕ ಮತ್ತು ಇ ಗುಂಪಿನಲ್ಲಿ 20 ಅಂಕ ಪಡೆದಿರುವ ಬರೋಡಾ ತಂಡಗಳು ನೇರವಾಗಿ ಎಂಟರ ಘಟ್ಟಕ್ಕೆ ಪ್ರವೇಶಿಸಿವೆ. ಗುಂಪು ಹಂತದಲ್ಲಿ ಕರ್ನಾಟಕ ತಂಡವು ಆಡಿದ್ದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ, 1ರಲ್ಲಿ ಸೋತಿತ್ತು. ಬರೋಡಾ 6 ಪಂದ್ಯಗಳಲ್ಲಿ 5ರಲ್ಲಿ ಜಯಿಸಿ, 1ರಲ್ಲಿ ಪರಾಭವಗೊಂಡಿತ್ತು.
ಮಯಂಕ್ ಅಗರವಾಲ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು 4 ಶತಕಗಳನ್ನು ಗಳಿಸಿದ್ದಾರೆ. ಒಟ್ಟು 613 ರನ್ ಗಳಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಲ್ಲದೇ ಕೆ.ಎಲ್. ಶ್ರೀಜಿತ್ ಮತ್ತು ಆರ್. ಸ್ಮರಣ್ ಅವರು ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 14 ವಿಕೆಟ್‌ಗಳನ್ನು ಗಳಿಸಿದ್ದಾರೆ. ಮಧ್ಯಮವೇಗಿ ವಿ. ಕೌಶಿಕ್ ಅವರು ಉತ್ತಮ ಲಯದಲ್ಲಿದ್ದಾರೆ. ವಿದ್ವತ್ ಕಾವೇರಪ್ಪ ಅವರ ಗೈರುಹಾಜರಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಪಂದ್ಯ ನಡೆಯಲಿರುವ ಮೋತಿಭಾಗ್ ಕ್ರೀಡಾಂಗಣವು ಬರೋಡಾ ತಂಡಕ್ಕೆ ತವರಿನಂಗಳವಾಗಿದೆ. ಆಲ್‌ರೌಂಡರ್ ಕೃಣಾಲ್, ವಿಷ್ಣು ಸೋಳಂಕಿ, ನಿನಾದ್ ಅಶ್ವಿನ್‌ಕುಮಾರ್ ರಥ್ವಾ ಅವರು ಉತ್ತಮ ಲಯದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಫಾರ್ಮ್‌ಗೆ ಮರಳಿದರೆ ಕರ್ನಾಟಕಕ್ಕೆ ಕಠಿಣ ಸವಾಲು ಎದುರಾಗಬಹುದು.
ಇಂಗ್ಲೆಂಡ್ ಎದುರಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ತಂಡದ ಆಯ್ಕೆ ಯು ಶೀಘ್ರದಲ್ಲಿಯೇ ನಡೆಯಲಿದೆ. ಆಯ್ಕೆಗಾರರ ಗಮನ ಸೆಳೆಯಲು ಆಟಗಾರರಿಗೆ ಈ ಕ್ವಾರ್ಟರ್‌ಫೈನಲ್ ಪ್ರಮುಖ ವೇದಿಕೆಯಾಗಿದೆ.
ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಮಹಾರಾಷ್ಟ್ರ ಮತ್ತು ಪಂಜಾಬ್ ತಂಡಗಳು ಹಣಾಹಣಿ ನಡೆಸಲಿವೆ.
ಪಂದ್ಯ ಆರಂಭ: ಬೆಳಿಗ್ಗೆ 9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.