ಟ್ವಿಟರ್ ಚಿತ್ರ
ನವದೆಹಲಿ: ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ವಿರಾಟ್ ಕೊಹ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.
36 ವರ್ಷದ ಕೊಹ್ಲಿ ಸೋಮವಾರ(ಮೇ 12) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅವರು ನಿವೃತ್ತಿ ಕುರಿತು ಮಾಹಿತಿ ಹಂಚಿಕೊಂಡರು.
123 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ. ಕಳೆದ ವರ್ಷ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಅವರು ಈಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
‘ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ವಿರಾಟ್ ಕೊಹ್ಲಿ ಇತರರಿಗೆ ಉದಾಹರಣೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕ್ರಿಕೆಟಿಗರು ಸೂಕ್ತ ಸಂದರ್ಭದಲ್ಲಿ ನಿವೃತ್ತಿ ಪಡೆಯದೇ ಇರುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಆದರೆ, ಇದು ಎಲ್ಲರೂ ಬಯಸುವ ನಿವೃತ್ತಿ. ವಿರಾಟ್ ಕೊಹ್ಲಿ ಮತ್ತಷ್ಟು ಕ್ರಿಕೆಟ್ ಆಡಬಹುದಿತ್ತು. ಆದರೂ ಅವರು ನಿವೃತ್ತರಾಗಿದ್ದಾರೆ. ಇದು ವಿರಾಟ್ ಅವರ ಶೈಲಿಯಾಗಿದೆ’ಎಂದು ಶರ್ಮಾ ಪಿಟಿಐ ವಿಡಿಯೊದಲ್ಲಿ ಕೊಂಡಾಡಿದ್ದಾರೆ.
ನಾನು ಕೊಹ್ಲಿ ಅವರೊಂದಿಗೆ ಮಾತನಾಡುತ್ತೇನೆ. ಆದರೆ, ಇದು ಅವರ ನಿರ್ಧಾರ. ನಾನು ಅವರ ನಿರ್ಧಾರವನ್ನು ಪ್ರಶಂಸಿಸುತ್ತೇನೆ. ಅವರು ದೇಶ ಮತ್ತು ಭಾರತ ತಂಡಕ್ಕೆ ನೀಡಿದ ಕೊಡುಗೆ ಶ್ಲಾಘಿಸುತ್ತೇನೆ. ಅವರೊಬ್ಬ ದಂತಕಥೆ ಎಂದಿದ್ದಾರೆ.
ಕೊಹ್ಲಿ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 68 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು 40 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ.
‘ಕೊಹ್ಲಿ ನಾಯಕನಾದಾಗ, ಭಾರತ ಕ್ರಿಕೆಟ್ ತಂಡದ ಆಟಗಾರರ ದೈಹಿಕ ಸದೃಢತೆ, ವಿದೇಶಿ ಗೆಲುವುಗಳಂತಹ ಸಂಪೂರ್ಣ ಸಂಸ್ಕೃತಿಯನ್ನು ಬದಲಾಯಿಸಿದರು ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಇದು ಅವರು ನೀಡಿದ ಬಹಳ ದೊಡ್ಡ ಕೊಡುಗೆಯಾಗಿದೆ. ಅವರದ್ದು ಸ್ಮರಣೀಯ ವೃತ್ತಿಜೀವನವಾಗಿದೆ. ನಾನು ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ’ಎಂದು ಶರ್ಮಾ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಿಂದ ಕೊಹ್ಲಿ ಅವರ ನಿವೃತ್ತಿ ದೇಶವನ್ನು ಆಘಾತಗೊಳಿಸಿದೆ. ಸ್ಟಾರ್ ಬ್ಯಾಟರ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸಲು ತಮಗೆ ಹಲವು ಸಂದೇಶಗಳು ಬಂದಿವೆ ಎಂದು ಶರ್ಮಾ ಹೇಳಿದ್ದಾರೆ.
‘ಇದು ಪ್ರತಿಯೊಬ್ಬ ಭಾರತೀಯನಿಗೂ ಬಹಳ ಭಾವನಾತ್ಮಕ ಕ್ಷಣವಾಗಿದೆ. ಕೊಹ್ಲಿ ಅಭಿಮಾನಿಗಳು ಮತ್ತು ಇತರ ದೇಶವಾಸಿಗಳು ವಿರಾಟ್ ಕೊಹ್ಲಿಯನ್ನು ಮನವೊಲಿಸಲು ನನ್ನನ್ನು ಕೇಳುತ್ತಿದ್ದಾರೆ. ಅವರು ಮುಂದೆಯೂ ಭಾರತಕ್ಕಾಗಿ ಆಡುವುದನ್ನು ನೋಡಲು ಬಯಸುತ್ತೇವೆ. ಅವರು (ಕೊಹ್ಲಿ) ನಿಮ್ಮ ಮಾತನ್ನು ಕೇಳುತ್ತಾರೆ. ನೀವು ಅವರೊಂದಿಗೆ ಮಾತನಾಡಿ ಎಂದು ಸಾವಿರಾರು ವಿನಂತಿಗಳು ಬಂದಿವೆ’ಎಂದು ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.