ADVERTISEMENT

ಮಹಿಳಾ ಕ್ರಿಕೆಟ್: ಭಾರತ–ಆಸ್ಟ್ರೇಲಿಯಾ ಹೊನಲು ಬೆಳಕಿನ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 20 ಮೇ 2021, 15:30 IST
Last Updated 20 ಮೇ 2021, 15:30 IST
ಸ್ಮೃತಿ ಮಂದಾನಾ
ಸ್ಮೃತಿ ಮಂದಾನಾ   

ನವದೆಹಲಿ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್‌ ತಂಡವು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಹೊನಲು ಬೆಳಕಿನ ಟೆಸ್ಟ್‌ ಪಂದ್ಯದಲ್ಲಿ ಆಡಲಿದೆ.

ಭಾರತದ ಮಹಿಳಾ ಕ್ರಿಕೆಟ್‌ ತಂಡವು ಇದೇ ಮೊದಲ ಬಾರಿಗೆ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಆಡಲಿದೆ. ಪರ್ತ್‌ನಲ್ಲಿ ಈ ಪಂದ್ಯವು ಆಯೋಜನೆಗೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

‘ಮಹಿಳಾ ಕ್ರಿಕೆಟ್ ಅಭಿವೃದ್ಧಿಗಾಗಿ ನಾವು ಬದ್ಧರಾಗಿದ್ದೇವೆ. ಆ ಪ್ರಯತ್ನದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಮಹಿಳಾ ಕ್ರಿಕೆಟ್‌ ಮಟ್ಟಿಗೆ ಇದು ಐತಿಹಾಸಿಕ ಪಂದ್ಯವಾಗಲಿದೆ‘ ಎಂದು ಶಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಜೂನ್ 16ರಂದು ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಟೆಸ್ಟ್ ಪಂದ್ಯ ಆಡಲಿದೆ. ಏಳು ವರ್ಷಗಳ ನಂತರ ಟೆಸ್ಟ್‌ ಆಡಲಿರುವುದು ವಿಶೇಷ.

ಅಲ್ಲಿಂದ ಆಸ್ಟ್ರೇಲಿಯಾಕ್ಕೆ ತಂಡವು ತೆರಳುವುದು. ಮೂರು ಏಕದಿನ ಪಂದ್ಯಗಳಲ್ಲಿ (ಸೆ. 19ರಿಂದ 24) ಮತ್ತು ಮೂರು ಟಿ20 ಪಂದ್ಯಗಳನ್ನು (ಅ. 7 ರಿಂದ 11) ಆಡಲಿದೆ.

ಭಾರತವು ಆಸ್ಟ್ರೇಲಿಯಾದ ವಿರುದ್ಧ ಕೊನೆಯ ಬಾರಿಗೆ 2006ರಲ್ಲಿ ಟೆಸ್ಟ್ ಪಂದ್ಯ ಆಡಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ 2017ರಲ್ಲಿ ನಡೆದಿದ್ದ ಹೊನಲು ಬೆಳಕಿನ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸಿಡ್ನಿಯಲ್ಲಿ ಆಡಿದ್ದವು. ಅದರ ನಂತರ ಈಗ ಮತ್ತೊಂದು ಪ್ರಯೋಗಕ್ಕಾಗಿ ಸಿದ್ಧತೆ ನಡೆಯುತ್ತಿದೆ.

‘ಈ ಸಂದರ್ಭದಲ್ಲಿ ಇಂತಹ ಆಯೋಜನೆಯು ಸವಾಲಿನದ್ದು ನಿಜ. ಆದರೆ, ಮಹಿಳಾ ಕ್ರಿಕೆಟಗರಿಗೆ ಟೆಸ್ಟ್ ಆಡುವ ಉತ್ತಮ ಅವಕಾಶ ಲಭಿಸುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಪಿಂಕ್‌ಬಾಲ್ ಟೆಸ್ಟ್ ಆಡುವುದು ಕಠಿಣ ಸವಾಲು. ಆದರೆ ನಮ್ಮ ತಂಡವು ಉತ್ತಮವಾಗಿ ಸಿದ್ಧತೆ ಮಾಡಿಕೊಳ್ಳುವುದು ಖಚಿತ‘ ಎಂದು ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.