ADVERTISEMENT

ಬಾಕ್ಸಿಂಗ್ ಡೇ ಟೆಸ್ಟ್‌: ಮಯಂಕ್‌ ಅಗರವಾಲ್‌ ಆಗುವರೇ ಭಾರತದ ‘ವಾಲ್‌’?

ಅರ್ಧಶತಕ ಗಳಿಸಿದ ಮಯಂಕ್‌, ಪೂಜಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 17:17 IST
Last Updated 26 ಡಿಸೆಂಬರ್ 2018, 17:17 IST
ಮಧ್ಯವ ವೇಗಿ ಪ್ಯಾಟ್ ಕಮಿನ್ಸ್ ಅವರ ಎಸೆತ ಹೆಲ್ಮೆಟ್‌ಗೆ ಬಡಿದಾಗ ಮಯಂಕ್ ಅಗರವಾಲ್‌ ಪ್ರತಿಕ್ರಿಯಿಸಿದ ರೀತಿ –ಎಎಫ್‌ಪಿ ಚಿತ್ರ
ಮಧ್ಯವ ವೇಗಿ ಪ್ಯಾಟ್ ಕಮಿನ್ಸ್ ಅವರ ಎಸೆತ ಹೆಲ್ಮೆಟ್‌ಗೆ ಬಡಿದಾಗ ಮಯಂಕ್ ಅಗರವಾಲ್‌ ಪ್ರತಿಕ್ರಿಯಿಸಿದ ರೀತಿ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಅಂಜದೆ, ಅಳುಕದೆ ದಿಟ್ಟತನದಿಂದ ಬ್ಯಾಟ್ ಬೀಸಿದ ಮಯಂಕ್ ಅಗರವಾಲ್‌ ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆಯನ್ನು ಸ್ಮರಣೀಯವಾಗಿಸಿಕೊಂಡರು. ಇಲ್ಲಿನ ಎಂಸಿಜಿಯಲ್ಲಿ ಬುಧವಾರ ಆರಂಭಗೊಂಡ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಈ ಆಟಗಾರ ಪ್ರಬುದ್ಧ ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿದರು. ಭಾರತದ ಮತ್ತೊಬ್ಬ ‘ಗೋಡೆ’ ಆಗುವ ನಿರೀಕ್ಷೆ ಹುಟ್ಟಿಸಿದರು.

ಟಾಸ್‌ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಸಿರು ತುಂಬಿದ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೊಸ ಆರಂಭಿಕ ಜೋಡಿ ಹನುಮ ವಿಹಾರಿ ಮತ್ತು ಮಯಂಕ್ ಅಗರವಾಲ್‌ ಮೊದಲ ವಿಕೆಟ್‌ಗೆ 40 ರನ್ ಕಲೆ ಹಾಕಿತು. ಆದರೆ ಇದರಲ್ಲಿ ಬಹುಪಾಲು ಮಯಂಕ್ ಅವರದಾಗಿತ್ತು. ಹನುಮ ವಿಹಾರಿ ಕೇವಲ ಎಂಟು ರನ್ ಗಳಿಸಿ ಕ್ರೀಸ್ ತೊರೆದರು.

ಜೋಶ್‌ ಹ್ಯಾಜಲ್‌ವುಡ್‌ ಹಾಕಿದ ಇನಿಂಗ್ಸ್‌ನ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೂರು ರನ್ ಗಳಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಖಾತೆ ತೆರೆದ ಮಯಂಕ್‌ ಅವರು ಹ್ಯಾಜಲ್‌ವುಡ್ ಅವರ ನಂತರದ ಓವರ್‌ನಲ್ಲಿ ಮತ್ತೆ ಮೂರು ರನ್ ಗಳಿಸಿದರು.

ADVERTISEMENT

ಪ್ಯಾಟ್‌ ಕಮಿನ್ಸ್ ಅವರ ಬೌನ್ಸರ್‌ಗಳು ಮತ್ತು ಮಿಷೆಲ್‌ ಸ್ಟಾರ್ಕ್‌ ಅವರ ತಾಸಿಗೆ 150 ಕಿ.ಮೀ ಆಸುಪಾಸಿನ ವೇಗದ ಎಸೆತಗಳನ್ನು ಸಮರ್ಥವಾಗಿ ಮೆಟ್ಟಿನಿಂತ ಅಗರವಾಲ್‌ ಏಳನೇ ಓವರ್‌ನಲ್ಲಿ ಸ್ಟಾರ್ಕ್ ಎಸೆತವನ್ನು ಬೌಂಡರಿಗೆ ಅಟ್ಟಿ ಆಕ್ರಮಣಕ್ಕೆ ಮುಂದಾದರು. ನಂತರ ನೇಥನ್ ಲಯನ್ ಮತ್ತು ಹ್ಯಾಜಲ್‌ವುಡ್‌ ಎಸೆತಗಳಲ್ಲೂ ಬೌಂಡರಿ ಗಳಿಸಿದರು. ಲಯನ್ ಹಾಕಿದ 48ನೇ ಓವರ್‌ನ ಮೊದಲ ಎಸೆತವನ್ನು ಮುನ್ನುಗ್ಗಿ ಲಾಂಗ್ ಆನ್‌ಗೆ ಎತ್ತಿ ಸಿಕ್ಸರ್‌ಗೆ ಅಟ್ಟಿದ ನೋಟ ಮನಮೋಹಕವಾಗಿತ್ತು.

ಮೊದಲ ರನ್‌ಗೆ 25 ಎಸೆತ: ಮೊದಲ ರನ್ ಗಳಿಸಲು 25 ಎಸೆತಗಳನ್ನು ಎದುರಿಸಿದ ಹನುಮ ವಿಹಾರಿ ಔಟಾದ ನಂತರ ಮಯಂಕ್ ಮತ್ತು ಚೇತೇಶ್ವರ್‌ ಪೂಜಾರ ಅವರ ಆಟ ಕಳೆಗಟ್ಟಿತು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಪೂಜಾರ ಕ್ರೀಸ್‌ಗೆ ಅಂಟಿಕೊಂಡ ನಂತರ ಎದುರಾಳಿ ಬೌಲರ್‌ಗಳಿಗೆ ತಲೆನೋವಾದರು. ಇವರಿಬ್ಬರ ಜೊತೆಯಾಟದಲ್ಲಿ 83 ರನ್‌ಗಳು ಹರಿದು ಬಂದವು. 55ನೇ ಓವರ್‌ನಲ್ಲಿ ಪ್ಯಾಟ್ ಕಮಿನ್ಸ್ ಅವರ ಬೌನ್ಸರ್ ಎಸೆತವನ್ನು ಕೆಣಕಲು ಪ್ರಯತ್ನಿಸಿದ ಅಗರವಾಲ್‌ ವಿಕೆಟ್ ಕಳೆದುಕೊಂಡರು.

ಪೂಜಾರ ಅರ್ಧಶತಕ; 92 ರನ್‌ ಜೊತೆಯಾಟ: ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದ ನಂತರ ಭಾರತದ ಇನಿಂಗ್ಸ್‌ ಮತ್ತಷ್ಟು ಕಳೆಕಟ್ಟಿತು. ಮೂರನೇ ವಿಕೆಟ್‌ಗೆ ವಿರಾಟ್ ಮತ್ತು ಪೂಜಾರ 92 ರನ್‌ ಕೂಡಿಸಿದರು. ಅರ್ಧಶತಕ ಗಳಿಸಿದ ಪೂಜಾರ ಮತ್ತು 47 ರನ್‌ಗಳೊಂದಿಗೆ ಕೊಹ್ಲಿ ಕ್ರೀಸ್‌ನಲ್ಲಿದ್ದು ಎರಡನೇ ದಿನ ದೊಡ್ಡ ಮೊತ್ತದ ಕನಸು ಹೊತ್ತು ಬ್ಯಾಟಿಂಗ್ ಪುನರಾರಂಭಿಸಲಿದ್ದಾರೆ.

ಮಯಂಕ್ ಅಗರವಾಲ್‌

ರನ್‌ 76

ಎಸೆತ 161

ಬೌಂಡರಿ 8

ಸಿಕ್ಸರ್‌ 1

ಸ್ಟ್ರೈಕ್ ರೇಟ್‌ 47.20

ಚೇತೇಶ್ವರ ಪೂಜಾರ*

ರನ್‌ 68

ಎಸೆತ 200

ಬೌಂಡರಿ 6

ಸ್ಟ್ರೈಕ್ ರೇಟ್‌ 34.00

ಜೊತೆಯಾಟಗಳು

ಹನುಮ ವಿಹಾರಿ;ಮೊದಲ ವಿಕೆಟ್‌, 40 ರನ್‌;ಮಯಂಕ್‌ ಅಗರವಾಲ್‌

8 (66 ಎಸೆತ);27 (47 ಎಸೆತ)

ಮಯಂಕ್‌ ಅಗರವಾಲ್‌;ಎರಡನೇ ವಿಕೆಟ್‌, 83 ರನ್‌;ಚೇತೇಶ್ವರ ಪೂಜಾರ

49 (114 ಎಸೆತ);33 (102 ಎಸೆತ)

ಚೇತೇಶ್ವರ ಪೂಜಾರ;ಮೂರನೇ ವಿಕೆಟ್‌, 92 ರನ್‌*;ವಿರಾಟ್ ಕೊಹ್ಲಿ

35 (98 ಎಸೆತ);47 (107 ಎಸೆತ)

**

ನನ್ನ ಅತ್ಯುತ್ತಮ ಗೆಳೆಯ ಮಯಂಕ್ ಅಗರವಾಲ್‌ ಚೊಚ್ಚಲ ಪಂದ್ಯ ಆಡುತ್ತಿರುವುದು ಮತ್ತು ಭಾರತ ತಂಡದ ಇನಿಂಗ್ಸ್ ಆರಂಭಿಸಿರುವುದು ತುಂಬ ಖುಷಿ ನೀಡಿದೆ. ಈ ಬಗ್ಗೆ ನನಗೆ ಹೆಮ್ಮೆ ಇದೆ. ಗೆಳೆಯಾ...ನೀನು ಚೆನ್ನಾಗಿ ಆಡಿ ಬೆಳೆಯಬೇಕು.

- ಕೆ.ಎಲ್‌.ರಾಹುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.