ADVERTISEMENT

ಪಿಚ್‌ ಅನಿಶ್ಚಿತ ವರ್ತನೆ; ನ್ಯೂಜಿಲೆಂಡ್‌ ಪರದಾಟ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 18:55 IST
Last Updated 22 ನವೆಂಬರ್ 2019, 18:55 IST
ನ್ಯೂಝಿಲೆಂಡ್ ತಂಡದ ಜೀತ್ ರಾವಲ್ ಬ್ಯಾಟಿಂಗ್ ವೈಖರಿ
ನ್ಯೂಝಿಲೆಂಡ್ ತಂಡದ ಜೀತ್ ರಾವಲ್ ಬ್ಯಾಟಿಂಗ್ ವೈಖರಿ   

ಮೌಂಟ್‌ ಮಾಂಗಾನೂಯಿ (ನ್ಯೂಜಿಲೆಂಡ್‌): ನಾಯಕ ಕೇನ್‌ ವಿಲಿಯಮ್ಸನ್‌ ಔಟಾದ ರೀತಿ, ಹೆನ್ರಿ ನಿಕೋಲ್ಸ್‌ ಅವರ ತಲೆಗೆ ಪೆಟ್ಟಾದ ರೀತಿ, ಬೇ ಓವಲ್‌ ಪಿಚ್‌ನ ಗುಣಮಟ್ಟದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ನಡುವೆ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಶುಕ್ರವಾರ ಪಿಚ್‌ ವರ್ತನೆ ಚರ್ಚೆಗೀಡಾಯಿತು.

ಎರಡನೇ ದಿನದ ಕೊನೆಯ ಅವಧಿಯಲ್ಲಿ ಪಿಚ್‌ ವರ್ತನೆ ಅನಿಶ್ಚಿತವಾಗಿತ್ತು. ಇಂಗ್ಲೆಂಡ್ ತಂಡದ 353 ರನ್‌ಗಳಿಗೆ ಉತ್ತರವಾಗಿ ಆತಿಥೇಯ ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 244 ರನ್‌ ಗಳಿಸಿ ಆಟ ಮುಗಿಸಿತು. ಔಟಾದವರಲ್ಲಿ ಅನುಭವಿಗಳಾದ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಒಳಗೊಂಡಿದ್ದಾರೆ.

51 ರನ್‌ ಗಳಿಸಿದ ವಿಲಿಯಮ್ಸನ್‌, ಸ್ಯಾಮ್‌ ಕರನ್‌ ಬೌಲಿಂಗ್‌ನಲ್ಲಿ ಚೆಂಡು ಆಡುವುದನ್ನು ತಪ್ಪಿಸಲು ಹೋದಾಗ, ಅದು ನಿರೀಕ್ಷೆಗೂ ಮೀರಿ ಒಳಬಂದು ಬ್ಯಾಟ್‌ಗೆ ತಾಗಿ ಎರಡನೇ ಸ್ಲಿಪ್‌ನಲ್ಲಿ ಕ್ಯಾಚಾಯಿತು. ಚೆಂಡು ಹೊರಳಿದ ರೀತಿ ನೋಡಿ ಸ್ವತಃ ಕರನ್‌ ಅಚ್ಚರಿಗೊಂಡರು.

ADVERTISEMENT

ಇಂಗ್ಲೆಂಡ್‌ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಟಿಮ್‌ ಸೌಥಿ ಕೂಡ ತಮ್ಮ ತಂಡದ ನಾಯಕ ಔಟಾದ ರೀತಿಗೆ ಬೆರಗಾದರು.

ನಿಕೋಲ್ಸ್‌ 26 ರನ್‌ ಗಳಿಸಿದ್ದಾಗ ಜೋಫ್ರಾ ಅರ್ಚರ್ ಬೌನ್ಸರ್‌ನಲ್ಲಿ ಚೆಂಡು ಅವರ ತಲೆಗೆ ಬಡಿಯಿತು. ತಕ್ಷಣದ ವೈದ್ಯಕೀಯ ತಪಾಸಣೆಯಲ್ಲಿ ಅಪಾಯ ಕಂಡಿಲ್ಲ. ಆದರೆ ಶನಿವಾರ ದಿನದಾಟಕ್ಕೆ ಮೊದಲು ಅವರು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ.

ಸ್ಕೋರುಗಳು: ಇಂಗ್ಲೆಂಡ್‌: 353 (ಬೆನ್ ಸ್ಟೋಕ್ಸ್‌ 91, ಜೋಸ್ ಬಟ್ಲರ್‌ 43; ಟಿಮ್‌ ಸೌಥಿ 88ಕ್ಕೆ4, ವ್ಯಾಗ್ನರ್‌ 90ಕ್ಕೆ3); ನ್ಯೂಜಿಲೆಂಡ್‌: 51 ಓವರುಗಳಲ್ಲಿ 4 ವಿಕೆಟ್‌ಗೆ 144 (ವಿಲಿಯಮ್ಸನ್‌ 51, ರಾಸ್‌ ಟೇಲರ್‌ 25, ನಿಕೋಲ್ಸ್‌ ಔಟಾಗದೇ 26; ಸ್ಯಾಮ್‌ ಕರನ್‌ 28ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.