ADVERTISEMENT

ಶಫೀಕ್, ಇಮಾಮ್ ತಾಳ್ಮೆಯ ಆಟ

ಇಂಗ್ಲೆಂಡ್ ಬೃಹತ್ ಮೊತ್ತ; ಪಾಕ್ ದಿಟ್ಟ ಹೋರಾಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 18:49 IST
Last Updated 2 ಡಿಸೆಂಬರ್ 2022, 18:49 IST
ಪಾಕಿಸ್ತಾನ ತಂಡದ ಇಮಾಮ್ ಉಲ್ ಹಕ್ (ಬಲ) ಮತ್ತು ಅಬ್ದುಲ್ ಶಫೀಕ್  –ಎಪಿ/ಪಿಟಿಐ ಚಿತ್ರ
ಪಾಕಿಸ್ತಾನ ತಂಡದ ಇಮಾಮ್ ಉಲ್ ಹಕ್ (ಬಲ) ಮತ್ತು ಅಬ್ದುಲ್ ಶಫೀಕ್  –ಎಪಿ/ಪಿಟಿಐ ಚಿತ್ರ   

ರಾವಲ್ಪಿಂಡಿ : ಆರಂಭಿಕ ಜೋಡಿ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಅವರು ತಾಳ್ಮೆಯ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಹೋರಾಟಕ್ಕೆ ಜೀವ ತುಂಬಿದರು.

ಪಂದ್ಯದ ಮೊದಲ ದಿನವಾದ ಗುರುವಾರ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡದ ನಾಲ್ವರು ಶತಕ ಬಾರಿಸಿದ್ದರು. ತಂಡವು ಒಂದೇ ದಿನದಲ್ಲಿ 506 ರನ್‌ ಗಳಿಸಿ ವಿಶ್ವದಾಖಲೆ ಬರೆದಿತ್ತು. ಎರಡನೇ ದಿನ ಆಟ ಮುಂದುವರಿಸಿದ ಇಂಗ್ಲೆಂಡ್ 657 ರನ್‌ಗಳಿಗೆ ಆಲೌಟ್ ಆಯಿತು. ರಾತ್ರಿ ಕ್ರೀಸ್‌ ಕಾಯ್ದಿದ್ದ ಹ್ಯಾರಿ ಬ್ರೂಕ್ (153) ರನ್ ಶತಕೋತ್ತರ ಅರ್ಧಶತಕ ಪೂರೈಸಿದರು. ಆದರೆ ಸ್ಟೋಕ್ಸ್‌ ಅರ್ಧಶತಕದ ಸನಿಹ ಎಡವಿದರು. ಬ್ಯಾಟರ್‌ಗಳ ಸ್ವರ್ಗದಂತಿರುವ ಪಿಚ್‌ನಲ್ಲಿ ಪಾಕ್ ತಂಡದ ನಸೀಂ ಶಾ ಮೂರು ಹಾಗೂ ಜಹೀದ್ ಮೆಹಮೂದ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು.

ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡದ ಶಫೀಕ್ ಹಾಗೂ ಇಮಾಮ್ ಯಾವುದೇ ಧಾವಂತ ತೋರಲಿಲ್ಲ. ಶಫೀಕ್ (ಬ್ಯಾಟಿಂಗ್ 89; 158ಎ, 4X10, 6X2) ಮತ್ತು ಇಮಾಮ್ (ಬ್ಯಾಟಿಂಗ್ 90; 148ಎ, 4X13, 6X1) ಉತ್ತಮ ಆರಂಭ ನೀಡಿದರು. ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ತಂಡವು 51 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 181 ರನ್ ಗಳಿಸಿತು.

ADVERTISEMENT

17 ವರ್ಷದ ನಂತರ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 101 ಓವರ್‌ಗಳಲ್ಲಿ 657 (ಹ್ಯಾರಿ ಬ್ರೂಕ್ 153, ಬೆನ್ ಸ್ಟೋಕ್ಸ್‌ 41, ವಿಲ್ ಜ್ಯಾಕ್ಸ್ 30, ರಾಬಿನ್ಸನ್ 37, ನಸೀಂ ಶಾ 140ಕ್ಕೆ3, ಮೊಹಮ್ಮದ್ ಅಲಿ 124ಕ್ಕೆ2, ಜಹೀದ್ ಮೆಹಮೂದ್ 235ಕ್ಕೆ4) ಪಾಕಿಸ್ತಾನ: 51 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 181 (ಅಬ್ದುಲ್ಲಾ ಶಫೀಕ್ ಬ್ಯಾಟಿಂಗ್ 89, ಇಮಾಮ್ ಉಲ್ ಹಕ್ ಬ್ಯಾಟಿಂಗ್ 90).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.