ADVERTISEMENT

ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಶ್ರೀರಾಮ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 21:23 IST
Last Updated 20 ಮೇ 2025, 21:23 IST
ಕೆಎಸ್‌ಸಿಎ ಲೋಗೊ
ಕೆಎಸ್‌ಸಿಎ ಲೋಗೊ   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿ ಕೆ. ಶ್ರೀರಾಮ್ ಅವರು ಆಯ್ಕೆಯಾದರು. 

ಈ ಮೊದಲು ಉಪಾಧ್ಯಕ್ಷರಾಗಿದ್ದ ಸಂಪತ್ ಕುಮಾರ್ ಅವರು ಈಚೆಗಷ್ಟೇ 70ನೇ ವಸಂತಕ್ಕೆ ಕಾಲಿಟ್ಟರು. ಬಿಸಿಸಿಐ ನಿಯಮಾವಳಿ ಪ್ರಕಾರ 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರಿಯುವಂತಿಲ್ಲ. ಆದ್ದರಿಂದ ಸಂಪತ್ ಅವರು ಸ್ಥಾನದಿಂದ ನಿರ್ಗಮಿಸಿದರು. 

‘ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಶ್ರೀರಾಮ್ ಮತ್ತು ಉಮಾಮಹೇಶ್ವರ್ ಅವರು ಸ್ಪರ್ಧಿಸಿದ್ದರು. ಅದರಲ್ಲಿ ಶ್ರೀರಾಮ್ ಅವರು ಜಯಿಸಿದರು. ಒಟ್ಟು 705 ಮತಗಳು ಚಲಾವಣೆಗೊಂಡವು. ಶ್ರೀರಾಮ್ 500ಕ್ಕೂ ಹೆಚ್ಚು ಮತ ಗಳಿಸಿದರು’ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶ್ರೀರಾಮ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಹಿರಿಯ ಪಿಚ್‌  ಕ್ಯುರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

‘ಕೆಎಸ್‌ಸಿಎಗೂ ನನಗೂ ಬಾಲ್ಯದಿಂದಲೂ ನಂಟಿದೆ. ನನ್ನ ತಂದೆ ಕಸ್ತೂರಿರಂಗನ್ ಅವರು ಪಿಚ್‌ ನಿರ್ಮಾತೃವಾಗಿದ್ದರು. ಅವರು ಕೂಡ ಕೆಎಸ್‌ಸಿಎಗೆ ಉಪಾಧ್ಯಕ್ಷರಾಗಿದ್ದರು. ಈಗ ನನಗೂ ಆ ಗೌರವ ಲಭಿಸಿದೆ. ರಾಜ್ಯದ ಕ್ರಿಕೆಟ್‌ಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ನನಗೆ ಸದಸ್ಯರು ಅವಕಾಶ ಕೊಟ್ಟಿದ್ದಾರೆ’ ಎಂದು ಶ್ರೀರಾಮ್ ಸಂತಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.