ADVERTISEMENT

ರಾಹುಲ್‌ –ಹಾರ್ದಿಕ್‌ ಪಾಂಡ್ಯ ಪ್ರಕರಣ ಒಂಬುಡ್ಸ್‌ಮನ್‌ಗೆ?

ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡಿದ್ದ ಭಾರತದ ಆಟಗಾರರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 19:44 IST
Last Updated 6 ಮಾರ್ಚ್ 2019, 19:44 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ನವದೆಹಲಿ (ಪಿಟಿಐ): ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತಿಗೆ ಒಳಗಾಗಿದ್ದ ಕೆ.ಎಲ್‌.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಕರಣದ ತನಿಖೆಯನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ, ಒಂಬುಡ್ಸ್‌ ಮನ್‌ಗೆ ವಹಿಸುವ ಸಾಧ್ಯತೆ ಇದೆ.

ಜನವರಿ ಆರರಂದು ಪ್ರಸಾರವಾದ ‘ಕಾಫಿ ವಿಥ್‌ ಕರಣ್’ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಂಡ್ಯ ಮತ್ತು ರಾಹುಲ್ ತಮ್ಮ ಲೈಂಗಿಕ ಅನುಭವದ ಕುರಿತು ಹೇಳಿದ್ದರು. ಇದು ವಿವಾದ ಸೃಷ್ಟಿಸಿತ್ತು. ಹೀಗಾಗಿ ಜನವರಿ 11ರಂದು ಇಬ್ಬರನ್ನು ಅಮಾನತು ಮಾಡಲಾಗಿತ್ತು. ನಂತರ ಇಬ್ಬರಿಗೂ ಷೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಜನವರಿ 25ರಂದು ಇಬ್ಬರ ಮೇಲಿನ ಅಮಾನತನ್ನು ರದ್ದುಗೊಳಿಸಲಾಗಿತ್ತು. ಒಂಬುಡ್ಸ್‌ಮನ್‌ ನೇಮಕ ಪ್ರಕ್ರಿಯೆ ತಡವಾಗಲಿದೆ ಎಂದು ಬಿಸಿಸಿಐ ತಿಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ ಡಿ.ಕೆ.ಜೈನ್ ಅವರನ್ನು ಒಂಬುಡ್ಸ್‌ಮನ್ ಆಗಿ ನೇಮಕ ಮಾಡಿದೆ. ಗುರುವಾರ ಸಭೆ ಸೇರಲಿರುವ ಆಡಳಿತಾಧಿಕಾರಗಳ ಸಮಿತಿಯು ಪ್ರಕರಣದ ಬಗ್ಗೆ ಚರ್ಚೆ ನಡೆಸಲಿದೆ.

ADVERTISEMENT

‘ಒಂಬುಡ್ಸ್‌ಮನ್‌ ನೇಮಕ ಆದ ನಂತರ ಇದು ಸಮಿತಿಯ ಮೊದಲ ಸಭೆಯಾಗಿದೆ. ಇಲ್ಲಿ ಅನೇಕ ವಿಷಯಗಳು ಚರ್ಚೆಗೆ ಬರಲಿವೆ’ ಎಂದು ಸಮಿತಿಯ ಮುಖ್ಯಸ್ಥ ವಿನೋದ್ ರಾಯ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ಒಂಬುಡ್ಸ್‌ಮನ್ ಆಗಿ ನೇಮಕಗೊಂಡ ನಂತರ ಪ್ರತಿಕ್ರಿಯಿಸಿದ ಜೈನ್‌ ಅವರು ರಾಹುಲ್ ಮತ್ತು ಪಾಂಡ್ಯ ಪ್ರಕರಣ ಒಳಗೊಂಡಂತೆ ಯಾವುದೇ ವಿಷಯವನ್ನು ವಹಿಸಿದರೂ ತನಿಖೆ ನಡೆಸಲು ಕಾತರನಾಗಿದ್ದೇನೆ ಎಂದಿದ್ದರು.

‘ಉಗ್ರ’ ರಾಷ್ಟ್ರಗಳ ಬಗ್ಗೆ ಚರ್ಚೆ ಸಾಧ್ಯತೆ: ಭಯೋತ್ಪಾದನೆಗೆ ನೆರವು ನೀಡುವ ರಾಷ್ಟ್ರಗಳನ್ನು ದೂರ ಇರಿಸಬೇಕು ಎಂದು ಐಸಿಸಿಯನ್ನು ಬಿಸಿಸಿಐ ಈಗಾ ಗಲೇ ಆಗ್ರಹಿಸಿದ್ದು ಈ ವಿಷಯ ಕೂಡ ಗುರುವಾರದ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.