ADVERTISEMENT

ನಿರಂತರ ಮಳೆ: ಹುಬ್ಬಳ್ಳಿಯಿಂದ ಕೆಪಿಎಲ್‌ ಸ್ಥಳಾಂತರ

ಬೆಂಗಳೂರು, ಮೈಸೂರಿನಲ್ಲಿ ನಡೆಯಲಿವ ಪಂದ್ಯಗಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 14:55 IST
Last Updated 7 ಆಗಸ್ಟ್ 2019, 14:55 IST

ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಆ. 22ರಿಂದ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಒಂಬತ್ತನೇ ಆವೃತ್ತಿಯ ಪಂದ್ಯಗಳನ್ನು ಬೆಂಗಳೂರು ಹಾಗೂ ಮೈಸೂರಿಗೆ ಸ್ಥಳಾಂತರಿಸಲಾಗಿದೆ.

ಕೆಪಿಎಲ್‌ ವೇಳಾಪಟ್ಟಿ ಪ್ರಕಟವಾದಾಗ ನಗರದಲ್ಲಿ ಜೋರು ಮಳೆ ಇರಲಿಲ್ಲ. ಆದ್ದರಿಂದ ಸಂಘಟಕರು ಸಿದ್ಧತೆ ಆರಂಭಿಸಿದ್ದರು. ಕಳೆದ ಒಂದು ವಾರದಿಂದ ಜೋರಾಗಿ ಮಳೆ ಸುರಿಯುತ್ತಿರುವ ಕಾರಣ ಆ ಸಿದ್ಧತೆ ಕೂಡ ಹಾಳಾಗಿತ್ತು. ಮೈದಾನದಲ್ಲಿ ಸಾಕಷ್ಟು ನೀರು ನಿಂತಿದೆ. ಆದ್ದರಿಂದ ಮೂರ್ನಾಲ್ಕು ದಿನಗಳಿಂದ ಸಿದ್ಧತೆ ನಿಲ್ಲಿಸಲಾಗಿತ್ತು.

ಈ ಕುರಿತು ಚರ್ಚಿಸಲು ಬುಧವಾರ ಬೆಂಗಳೂರಿನಲ್ಲಿ ನಡೆದ ಕೆಪಿಎಲ್‌ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಪಂದ್ಯಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು.

ADVERTISEMENT

‘ಹುಬ್ಬಳ್ಳಿಯಲ್ಲಿ ಇನ್ನೂ ಕೆಲ ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಏಳೂ ಪಂದ್ಯಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಅ. 16ರಿಂದ ಬೆಂಗಳೂರಿನಲ್ಲಿ ಕೆಪಿಎಲ್‌ ಆರಂಭವಾಗಲಿದೆ. ಹುಬ್ಬಳ್ಳಿಯ ಕೆಲ ಪಂದ್ಯಗಳನ್ನು ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಸಲಾಗುವುದು’ ಎಂದು ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ ತಿಳಿಸಿದ್ದಾರೆ.

‘ಹುಬ್ಬಳ್ಳಿಯಲ್ಲಿ ಸಿದ್ಧತೆ ಆರಂಭಿಸಿದ್ದೆವು. ನಿರಂತರ ಮಳೆ ಸುರಿಯುತ್ತಿರುವ ಕಾರಣ ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು’ ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ ತಿಳಿಸಿದರು.

ಆ. 22ರಂದು ಹುಬ್ಬಳ್ಳಿ ಟೈಗರ್ಸ್‌–ಬೆಳಗಾವಿ ಪ್ಯಾಂಥರ್ಸ್‌, 23ರಂದು ಬಿಜಾಪುರ ಬುಲ್ಸ್‌–ಮೈಸೂರು ವಾರಿಯರ್ಸ್‌, ಶಿವಮೊಗ್ಗ ಲಯನ್ಸ್‌–ಬಳ್ಳಾರಿ ಟಸ್ಕರ್ಸ್‌, 24ರಂದು ಬೆಳಗಾವಿ ಪ್ಯಾಂಥರ್ಸ್‌–ಶಿವಮೊಗ್ಗ ಲಯನ್ಸ್‌, ಹುಬ್ಬಳ್ಳಿ ಟೈಗರ್ಸ್‌–ಬಿಜಾಪುರ ಬುಲ್ಸ್‌, 25ರಂದು ಬೆಳಗಾವಿ ಪ್ಯಾಂಥರ್ಸ್‌–ಶಿವಮೊಗ್ಗ ಲಯನ್ಸ್‌ ಮತ್ತು ‌ಹುಬ್ಬಳ್ಳಿ ಟೈಗರ್ಸ್‌–ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ನಡುವೆ ಪಂದ್ಯಗಳು ನಡೆಯಬೇಕಿದ್ದವು.

ಹೋದ ವರ್ಷದ ಕೆಪಿಎಲ್‌ ಟೂರ್ನಿಯ ಹುಬ್ಬಳ್ಳಿಯ ಆವೃತ್ತಿಯ ಪಂದ್ಯಗಳು ಕೂಡ ಮಳೆಗೆ ಆಹುತಿಯಾಗಿದ್ದವು. ಇಲ್ಲಿ ಆಯೋಜನೆಯಾಗಿದ್ದ ಒಟ್ಟು 11 ಪಂದ್ಯಗಳ ಪೈಕಿ ಎರಡು ಪಂದ್ಯಗಳಷ್ಟೇ ನಡೆದಿದ್ದವು. ಉಳಿದ ಪಂದ್ಯಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.