ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪ್ರೇಕ್ಷಕರ ಗ್ಯಾಲರಿಗಳು ಭರ್ತಿಯಾಗಿದ್ದವು. ಆದರೆ ಅವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯಿಸಲಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಗೆದ್ದಿತ್ತು.
ವಡೋದರಾದಲ್ಲಿ ನಡೆದಿದ್ದ ಟೂರ್ನಿಯ ಮೊದಲ ಹಂತದ ಎರಡೂ ಪಂದ್ಯಗಳಲ್ಲಿ ಜಯಿಸಿದ್ದ ಸ್ಮೃತಿ ಬಳಗವು ತವರಿನಂಗಳದಲ್ಲಿ ಎಡವಿತ್ತು. ಆದರೆ ಸೋಮವಾರ ಯು.ಪಿ. ವಾರಿಯರ್ಸ್ ಎದುರು ಕಣಕ್ಕಿಳಿಯಲಿರುವ ಬೆಂಗಳೂರು ತಂಡವು ಗೆಲುವಿನ ಛಲದಲ್ಲಿದೆ.
ಹಾಲಿ ಚಾಂಪಿಯನ್ ಬೆಂಗಳೂರು ತಂಡದ ನಾಯಕ ಸ್ಮೃತಿ ಮಂದಾನ ಉತ್ತಮ ಲಯದಲ್ಲಿದ್ದಾರೆ. ಇನಿಂಗ್ಸ್‌ಗೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಅಭಿಮಾನಿಗಳ ‘ಕಣ್ಮಣಿ’ ಎಲಿಸ್ ಪೆರಿ ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಗಿತ್ತು. ರಿಚಾ ಘೋಷ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ.
ವೈಟ್ ಹಾಜ್, ರಾಘವಿ ಬಿಷ್ಠ್ ಮತ್ತು ಕನಿಕಾ ಅಹುಜಾ ಅವರು ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡರೆ ತಂಡವು ದೊಡ್ಡ ಮೊತ್ತ ಪೇರಿಸಬಹುದು ಅಥವಾ ಬೆನ್ನತ್ತಿ ಜಯಿಸಲೂಬಹುದು.
ಬೌಲಿಂಗ್ ವಿಭಾಗದಲ್ಲಿ ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ಥ್ ಮತ್ತು ರೇಣುಕಾ ಸಿಂಗ್ ಅವರ ಮೇಲೆ ಹೆಚ್ಚು ಭರವಸೆ ಇಡಬಹುದು. ಆದರೆ ಯು.ಪಿ. ವಾರಿಯರ್ಸ್ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ. ವಾರಿಯರ್ಸ್ ತಂಡದ ಎಂಟನೇ ಕ್ರಮಾಂಕದ ಆಟಗಾರ್ತಿ ಚೈನೆಲ್ ಹೆನ್ರಿ ಎಂಟು ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ್ದರು. ಅದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತ್ತು. ಬೌಲಿಂಗ್‌ನಲ್ಲಿ ತಲಾ 4 ವಿಕೆಟ್ ಗಳಿಸಿದ ಕ್ರಾಂತಿ ಗೌಡ್ ಮತ್ತು ಗ್ರೇಸ್ ಹ್ಯಾರಿಸ್ ತಂಡವನ್ನು ಜಯದತ್ತ ಮುನ್ನಡೆಸಿದ್ದರು.
ವಾರಿಯರ್ಸ್ ತಂಡವು ಇದುವರೆಗೆ 3 ಪಂದ್ಯಗಳನ್ನು ಆಡಿ ಎರಡರಲ್ಲಿ ಸೋತಿದೆ. ಎರಡನೇ ಜಯ ಸಾಧಿಸಲು ಆರ್‌ಸಿಬಿಗೆ ಕಠಿಣ ಸವಾಲೊಡ್ಡಲು ಸಿದ್ಧವಾಗಿದೆ.
ತಂಡಗಳು..
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂದಾನ (ನಾಯಕ) ಕನಿಕಾ ಅಹುಜಾ ಏಕ್ತಾ ಬಿಷ್ಟ್ ಚಾರ್ಲಿ ಡೀನ್ ಕಿಮ್ ಗಾರ್ಥ್ ರಿಚಾ ಘೋಷ್ (ವಿಕೆಟ್‌ಕೀಪರ್) ಹೀಥರ್ ಗ್ರಹಾಂ ವಿ.ಜೆ. ಜೋಶಿತಾ ಎಸ್. ಮೇಘನಾ ನಝತ್ ಪರವೀನ್ ಜಾಗ್ರವಿ ಪವಾರ್ ಎಲಿಸ್ ಪೆರಿ ರಾಘವಿ ಬಿಷ್ಟ ಸ್ನೇಹ ರಾಣಾ ಪ್ರೇಮಾ ರಾವತ್ ರೇಣುಕಾ ಸಿಂಗ್ ಜಾರ್ಜಿಯಾ ವೇರ್‌ಹ್ಯಾಮ್ ಡ್ಯಾನಿ ವೈಡ್ ಹಾಜ್.
ಯು.ಪಿ. ವಾರಿಯರ್ಸ್: ದೀಪ್ತಿ ಶರ್ಮಾ (ನಾಯಕ) ಅಂಜಲಿ ಸರವಣಿ ಚಾಮರಿ ಅಟಪಟ್ಟು ಉಮಾ ಚೆಟ್ರಿ ಸೋಫಿ ಎಕ್ಸೆಲ್‌ಸ್ಟೋನ್ ರಾಜೇಶ್ವರಿ ಗಾಯಕವಾಡ ಅರುಷಿ ಗೋಯೆಲ್ ಕ್ರಾಂತಿ ಗೌಡ ಗ್ರೇಸ್ ಹ್ಯಾರಿಸ್ ಚೈನೆಲ್ ಹೆನ್ರಿ ಪೂನಮ್ ಕೆಮ್ನರ್ ಅಲನಾ ಕಿಂಗ್ ತಹಲಿಯಾ ಮೆಕ್‌ಗ್ರಾ ಕಿರಣ್ ನವಗಿರೆ ಶ್ವೇತಾ ಸೆಹ್ರಾವತ್ ಗೌಹರ್ ಸುಲ್ತಾನಾ ಸೈಮಾ ಠಾಕೂರ್ ವೃಂದಾ ದಿನೇಶ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.