ADVERTISEMENT

‘ನಾಯಕ’ ರೋಹಿತ್ ಅರ್ಧಶತಕದ ಅಭ್ಯಾಸ

ವಾರ್ಮ್‌ ಅಪ್ ಪಂದ್ಯ: ಆಸ್ಟ್ರೇಲಿಯಾ ಎದುರು ಗೆದ್ದ ಭಾರತ; ರಾಹುಲ್‌, ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 19:21 IST
Last Updated 20 ಅಕ್ಟೋಬರ್ 2021, 19:21 IST
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ
ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ   

ದುಬೈ (ಪಿಟಿಐ): ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡವನ್ನು ಚುಟುಕು ಕ್ರಿಕೆಟ್‌ನಲ್ಲಿ ಮುನ್ನಡೆಸುವ ಮತ್ತು ಬ್ಯಾಟಿಂಗ್‌ ಲಯಕ್ಕೆ ಮರ ಳುವ ಅಭ್ಯಾಸವನ್ನು ರೋಹಿತ್ ಶರ್ಮಾ ಬುಧವಾರ ಅಚ್ಚುಕಟ್ಟಾಗಿ ನಿಭಾ ಯಿಸಿದರು.

ಇಲ್ಲಿ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ರೋಹಿತ್, ತಂಡದ ನಾಯಕತ್ವ ವಹಿಸಿದ್ದರು. ಅರ್ಧಶತಕವನ್ನೂ ಗಳಿಸಿದರು. ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 ರನ್‌ ಗಳಿಸಿತು.ಭಾರತ ತಂಡವು 17.5 ಓವರ್‌ಗಳಲ್ಲಿ 1 ವಿಕೆಟ್‌ಗೆ 153 ರನ್ ಗಳಿಸಿ ಜಯ ದಾಖಲಿಸಿತು.

ADVERTISEMENT

ಭಾರತದ ಸ್ಪಿನ್‌ ಜೋಡಿ ಆರ್. ಅಶ್ವಿನ್ (8ಕ್ಕೆ2) ಮತ್ತು ರವೀಂದ್ರ ಜಡೇಜ (35ಕ್ಕೆ1) ಅವರ ಮೋಡಿಯಿಂದಾಗಿ ಆರಂಭದಲ್ಲಿಯೇ ಆಘಾತ ಅನುಭವಿಸಿತು. 11 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಡೇವಿಡ್ ವಾರ್ನರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.

ಆದರೆ, ಮಧ್ಯಮಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್ (57 ರನ್) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (37 ರನ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಗಳಿಸಿದರು. ಇದರಿಂದಾಗಿ ತಂಡವು ತುಸು ಚೇತರಿಕೆ ಕಂಡಿತು.

12ನೇ ಓವರ್‌ನಲ್ಲಿ ಸ್ಪಿನ್ನರ್ ರಾಹುಲ್ ಚಾಹರ್ ಈ ಜೊತೆಯಾಟವನ್ನು ಮುರಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ರಾಹುಲ್ ಸಂಭ್ರಮಿಸಿದರು.

ಕ್ರೀಸ್‌ಗೆ ಬಂದ ಮಾರ್ಕಸ್ ಸ್ಟೋಯಿನಿಸ್ (41; 25ಎಸೆತ) ಬಿರುಸಿನ ಬ್ಯಾಟಿಂಗ್ ಮಾಡಿದರು. ಸ್ಮಿತ್ ಜೊತೆಗೂಡಿದ ಅವರು ಐದನೇ ವಿಕೆಟ್ ಜತೆಯಾಟದಲ್ಲಿ 76 ರನ್‌ಗಳಿಸಿ ಗೌರವಾರ್ಹ ಮೊತ್ತ ಪೇರಿಸಲು ನೆರವಾದರು. ಆದರೆ, ಆಸ್ಟ್ರೇಲಿಯಾ ತಂಡವು ಬೌಲಿಂಗ್‌ನಲ್ಲಿ ಯಶಸ್ವಿಯಾಗಲು ರೋಹಿತ್ ಬಿಡಲಿಲ್ಲ.

ರೋಹಿತ್ ಮತ್ತು ಕೆ.ಎಲ್. ರಾಹುಲ್ (39 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 68 ರನ್ ಗಳಿಸಿ ಭದ್ರ ಬುನಾದಿ ಹಾಕಿದರು. 10ನೇ ಓವರ್‌ನಲ್ಲಿ ರಾಹುಲ್ ಔಟಾದರು. ವಿರಾಟ್ ಬದಲು ಮೂರನೇ ಕ್ರಮಾಂಕದಲ್ಲಿ ಆಡಿದ ಸೂರ್ಯ ಕುಮಾರ್ ಯಾದವ್ (ಔಟಾಗದೆ 38) ಭರವಸೆ ಮೂಡಿಸಿದರು. ರೋಹಿತ್ ಗಾಯಗೊಂಡು ನಿವೃತ್ತರಾದಾಗ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ (ಔಟಾಗದೆ 14; 8ಎ, 1ಸಿ) ಸೂರ್ಯ ಜೊತೆಗೂಡಿ ಗೆಲುವಿನ ದಡ ಸೇರಿಸಿದರು.

ಈ ಪಂದ್ಯದಲ್ಲಿಯೂ ಹಾರ್ದಿಕ್ ಬೌಲಿಂಗ್ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.