ADVERTISEMENT

SA vs SL: ಜಾನ್ಸೆನ್‌ಗೆ 7 ವಿಕೆಟ್; 13.5 ಓವರ್‌ನಲ್ಲೇ ಶ್ರೀಲಂಕಾ 42ಕ್ಕೆ ಆಲೌಟ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 12:58 IST
Last Updated 28 ನವೆಂಬರ್ 2024, 12:58 IST
<div class="paragraphs"><p>ಮಾರ್ಕೊ ಜಾನ್ಸೆನ್</p></div>

ಮಾರ್ಕೊ ಜಾನ್ಸೆನ್

   

(ಚಿತ್ರ ಕೃಪೆ: X/@ProteasMenCSA)

ಡರ್ಬನ್: ದಕ್ಷಿಣ ಆಫ್ರಿಕಾದ ಎಡಗೈ ವೇಗದ ಬೌಲರ್ ಮಾರ್ಕೊ ಜಾನ್ಸೆನ್ ಮಾರಕ ದಾಳಿಗೆ (13ಕ್ಕೆ 7 ವಿಕೆಟ್) ತತ್ತರಿಸಿರುವ ಶ್ರೀಲಂಕಾ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 13.5 ಓವರ್‌ಗಳಲ್ಲಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದೆ.

ADVERTISEMENT

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಲಂಕಾದಿಂದ ದಾಖಲಾದ ಕಡಿಮೆ ಮೊತ್ತವಾಗಿದೆ. 1994ರ ಕ್ಯಾಂಡಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 71 ರನ್‌ಗೆ ಆಲೌಟ್ ಆಗಿರುವುದು ಈವರೆಗೆ ಕಳಪೆ ಸಾಧನೆಯಾಗಿತ್ತು.

83 ಎಸೆತಗಳಲ್ಲೇ ಶ್ರೀಲಂಕಾ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 1924ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 70 ಎಸೆತಗಳಲ್ಲೇ ಕೇವಲ 30 ರನ್ನಿಗೆ ಆಲೌಟ್ ಆಗಿತ್ತು.

ಶ್ರೀಲಂಕಾದ ಬ್ಯಾಟಿಂಗ್ ಕಾರ್ಡ್ ಇಂತಿದೆ: 3, 2, 0, 1, 13, 7, 0, 0, 0, 10*, 0

ಕಮಿಂಡು ಮೆಂಡಿಸ್ 13 ರನ್ ಗಳಿಸಿರುವುದು ಬಿಟ್ಟರೆ ಬೇರೆ ಯಾವ ಬ್ಯಾಟರ್ ಎರಡಂಕಿಯನ್ನು ತಲುಪಲಿಲ್ಲ. ಈ ಪೈಕಿ ನಾಲ್ವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು. ಇತರೆ ರೂಪದಲ್ಲಿ 6 ರನ್ ದಾಖಲಾದವು. ಪಥುಮ್ ನಿಸ್ಸಾಂಕ, ಕರುಣಾರತ್ನೆ, ಚಾಂದಿಮಾಲ್, ಮ್ಯಾಥ್ಯೂಸ್, ನಾಯಕ ಧನಂಜಯ ಡಿಸಿಲ್ವ, ಕುಸಾಲ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೊ, ಅಸಿತ ಫೆರ್ನಾಂಡೊ ವೈಫಲ್ಯ ಅನುಭವಿಸಿದರು.

ದಕ್ಷಿಣ ಆಫ್ರಿಕಾದ ಪರ ಮಾರಕ ದಾಳಿ ಸಂಘಟಿಸಿದ ಜಾನ್ಸೆನ್, 6.5 ಓವರ್‌ಗಳಲ್ಲಿ 13 ರನ್ ತೆತ್ತು ಏಳು ವಿಕೆಟ್ ಕಬಳಿಸಿದರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು. ಗೇರಾಲ್ಡ್ ಕಾಟ್ಜಿ ಎರಡು ಹಾಗೂ ಕಗಿಸೊ ರಬಾಡ ಒಂದು ವಿಕೆಟ್ ಗಳಿಸಿದರು.

1955ರಲ್ಲಿ ಇಂಗ್ಲೆಂಡ್ ವಿರುದ್ಧದ ಆಕ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ 26 ರನ್ನಿಗೆ ಆಲೌಟ್ ಆಗಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗಿನ ಕನಿಷ್ಠ ಮೊತ್ತವಾಗಿದೆ.

2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ 36 ರನ್ನಿಗೆ ಆಲೌಟ್ ಆಗಿರುವುದು ಭಾರತದ ಕಳಪೆ ಸಾಧನೆಯಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ 46 ರನ್ನಿಗೆ ಆಲೌಟ್ ಆಗಿತ್ತು.

ಅಂದ ಹಾಗೆ ಡರ್ಬನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 191 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೂ ಎರಡನೇ ದಿನದಾಟದಲ್ಲಿ ಶ್ರೀಲಂಕಾವನ್ನು 42 ರನ್ನಿಗೆ ಕಟ್ಟಿ ಹಾಕುವ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 149 ರನ್‌ಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.