ADVERTISEMENT

ಸ್ಮೃತಿ ಬಳಗಕ್ಕೆ ಆರಂಭದಲ್ಲೇ ಆಘಾತ

ಇಂಗ್ಲೆಂಡ್ ಮಹಿಳಾ ತಂಡದ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿ: ಭಾರತಕ್ಕೆ ಭಾರಿ ಸೋಲು

ಪಿಟಿಐ
Published 4 ಮಾರ್ಚ್ 2019, 19:31 IST
Last Updated 4 ಮಾರ್ಚ್ 2019, 19:31 IST
ಅರ್ಧ ಶತಕ ಗಳಿಸಿದ ಇಂಗ್ಲೆಂಡ್‌ನ ಟಾಮಿ ಬ್ಯೂಮೌಂಟ್‌ ಅವರ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ
ಅರ್ಧ ಶತಕ ಗಳಿಸಿದ ಇಂಗ್ಲೆಂಡ್‌ನ ಟಾಮಿ ಬ್ಯೂಮೌಂಟ್‌ ಅವರ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ   

ಗುವಾಹಟಿ : ಎಲ್ಲ ವಿಭಾಗಗಳಲ್ಲೂ ಎಡವಿದ ಭಾರತ ಮಹಿಳೆಯರ ತಂಡ ಇಂಗ್ಲೆಂಡ್ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿತು. ಇಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 41 ರನ್‌ಗಳಿಂದ ಸೋತಿತು.

ಗಾಯಗೊಂಡಿರುವ ಹರ್ಮನ್‌ಪ್ರೀತ್‌ ಕೌರ್‌ ಅನುಪಸ್ಥಿತಿಯಲ್ಲಿ ನಾಯಕಿಯಾಗಿ ಚೊಚ್ಚಲ ಪಂದ್ಯ ಆಡಿದ ಸ್ಮೃತಿ ಮಂದಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ತಂಡದ ಬೌಲರ್‌ಗಳು ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಹೀಗಾಗಿ ಪ್ರವಾಸಿ ತಂಡದವರು ಸವಾಲಿನ ಮೊತ್ತ ಸೇರಿಸಿದರು.

ಇದಕ್ಕೆ ಉತ್ತರಿಸಿದ ಭಾರತದ ಬ್ಯಾಟ್ಸ್‌ವುಮನ್‌ಗಳು ಪೆವಿಲಿಯನ್‌ಗೆ ಪೆರೇಡ್ ನಡೆಸಿದರು. ಇದು, ಟ್ವೆಂಟಿ–20 ಪಂದ್ಯಗಳಲ್ಲಿ ಭಾರತದ ಸತತ ಐದನೇ ಸೋಲು.

ADVERTISEMENT

ಹರ್ಲಿನ್ ಡಿಯೋಲ್ ಮತ್ತು ಸ್ಮೃತಿ ಮಂದಾನ ಭರ್ಜರಿ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ಎರಡು ಓವರ್‌ಗಳಲ್ಲಿ ತಂಡಕ್ಕೆ 20 ರನ್‌ ಗಳಿಸಲು ಸಾಧ್ಯವಾಯಿತು. ಆದರೆ ಎರಡು ಮತ್ತು ಮೂರನೇ ಓವರ್‌ಗಳಲ್ಲಿ ಬ್ರುಂಟ್ ಮತ್ತು ಸ್ಮಿತ್ ಭಾರತಕ್ಕೆ ಪೆಟ್ಟು ನೀಡಿದರು. ಹರ್ಲಿನ್ ಅವರನ್ನು ಬ್ರುಂಟ್‌ ಔಟ್ ಮಾಡಿದರೆ, ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ಗೆ ಸ್ಮಿತ್‌ ಪೆವಿಲಿಯನ್ ಹಾದಿ ತೋರಿದರು.

ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಕೂಡ ಬೇಗನೇ ವಾಪಸಾದರು. ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ಸ್ವಲ್ಪ ಪ್ರತಿರೋಧ ತೋರಿದರು. ಶಿಖಾ ಪಾಂಡೆ ಅಜೇಯ 23 ರನ್‌ ಗಳಿಸಿದರು. ಆದರೆ ಅಷ್ಟರಲ್ಲಿ ಎದುರಾಳಿಗಳ ಜಯ ಖಚಿತವಾಗಿತ್ತು.

ಬ್ಯೂಮೌಂಟ್‌–ವ್ಯಾಟ್‌ ಅಮೋಘ ಜೊತೆಯಾಟ:ಟಾಮಿ ಬ್ಯೂಮೌಂಟ್ ಮತ್ತು ಡ್ಯಾನಿಯೆಲಿ ವ್ಯಾಟ್‌ ಮೊದಲ ವಿಕೆಟ್‌ಗೆ 89 ರನ್ ಸೇರಿಸಿ ಇಂಗ್ಲೆಂಡ್ ಇನಿಂಗ್ಸ್‌ಗೆ ಭದ್ರ ತಳಪಾಯ ಹಾಕಿದರು. ವ್ಯಾಟ್ ಮತ್ತು ಶೀವರ್ ಔಟಾದ ನಂತರ ಬ್ಯೂಮೌಂಟ್‌ ಜೊತೆಗೂಡಿದ ನಾಯಕಿ ಹಿದರ್ ನೈಟ್ 59 ರನ್ ಸೇರಿಸಿದರು. 19ನೇ ಓವರ್‌ನಲ್ಲಿ ನೈಟ್ ಮತ್ತು 20ನೇ ಓವರ್‌ನಲ್ಲಿ ಬ್ಯೂಮೌಂಟ್ ಔಟಾದರು.

‘ಇದು ಪ್ರಯೋಗಗಳಿಗೆ ಸೂಕ್ತ ಸಮಯವಲ್ಲ’

ತಂಡದಲ್ಲಿ ಪ್ರಯೋಗಗಳನ್ನು ಮಾಡಲು ಇದು ಸೂಕ್ತ ಸಮಯವಲ್ಲ ಎಂದು ಸ್ಮೃತಿ ಮಂದಾನ ಅಭಿಪ್ರಾಯಪಟ್ಟರು.

ಪಂದ್ಯದ ನಂತರ ಮಾತನಾಡಿದ ಅವರು ‘ಹೊಸ ಆಟಗಾರ್ತಿಯರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಮಹತ್ವದ ಪಂದ್ಯಗಳಲ್ಲಿ ಪ್ರಯೋಗ ಮಾಡುವುದು ಸರಿಯಲ್ಲ. ಪಂದ್ಯ ಗೆಲ್ಲುವುದಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದರು.

ಸೋಮವಾರದ ಪಂದ್ಯದಲ್ಲಿ ಹರ್ಲಿನ್ ಡಿಯೋಲ್ ಅವರಿಗೆ ಅವಕಾಶ ನೀಡಲಾಗಿತ್ತು. ಅವರಿಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ನೀಡಲಾಗಿತ್ತು.

***

ಕೊನೆಯ ಓವರ್‌ಗಳಲ್ಲಿ 10ರಿಂದ 15 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟದ್ದು ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಕಾಣಲಾಗದ್ದು ಸೋಲಿಗೆ ಕಾರಣವಾಯಿತು.

–ಸ್ಮೃತಿ ಮಂದಾನ, ಭಾರತ ತಂಡದ ನಾಯಕಿ

ತಂಡದ ಸಂಘಟಿತ ಶ್ರಮವೇ ಗೆಲುವಿಗೆ ಕಾರಣ. ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು. ಆದ್ದರಿಂದ ನನಗೂ ಉತ್ತಮ ಕಾಣಿಕೆ ನೀಡಲು ಸಾಧ್ಯವಾಯಿತು. ಗೆಲುವು ಖುಷಿ ತಂದಿದೆ.

–ಹಿದರ್ ನೈಟ್‌, ಇಂಗ್ಲೆಂಡ್ ತಂಡದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.