ADVERTISEMENT

ಐಸಿಸಿಯ ಕೆಲವು ಮಾರ್ಗಸೂಚಿಗಳು ಅಪ್ರಾಯೋಗಿಕ

ಮರು ಪರಿಶೀಲನೆ ಅಗತ್ಯ: ಹಿರಿಯ ಕ್ರಿಕೆಟಿಗರ ಅಭಿಪ್ರಾಯ

ಪಿಟಿಐ
Published 25 ಮೇ 2020, 20:00 IST
Last Updated 25 ಮೇ 2020, 20:00 IST
ಇರ್ಫಾನ್‌ ಪಠಾಣ್‌
ಇರ್ಫಾನ್‌ ಪಠಾಣ್‌   

ನವದೆಹಲಿ: ‘ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟ್ ಚಟುವಟಿಕೆಗಳ‌ ಪುನರರಾಂಭಕ್ಕೆ ಐಸಿಸಿ ನೀಡಿರುವ ಕೆಲವು ಮಾರ್ಗಸೂಚಿಗಳು ಅಪ‍್ರಾಯೋಗಿಕವಾಗಿದ್ದು, ಅವುಗಳ ಮರು‌ಪರಿಶೀಲನೆ ನಡೆಯಬೇಕು’ ಎಂದು ಹಿರಿಯ ಕ್ರಿಕೆಟಿಗರಾದ ಆಕಾಶ್‌ ಚೋ‍ಪ್ರಾ, ಇರ್ಫಾನ್‌ ಪಠಾಣ್‌ ಮತ್ತು ಮಾಂಟಿ ಪನೇಸರ್‌ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯಕ್ಕಿಂತ ಮೊದಲು ಆಟಗಾರರಿಗೆ 14 ದಿನಗಳ ಕ್ವಾರಂಟೈನ್‌ ಸೇರಿದಂತೆ, ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ಹೋದ ವಾರ ಕೆಲವು ಮಾರ್ಗಸೂಚಿಗಳನ್ನು ಶಿಫಾರಸು ಮಾಡಿತ್ತು.

‘ವೈಯಕ್ತಿಕ ಕ್ರೀಡೆಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಸಾಧ್ಯವಾಗಬಹುದು. ಆದರೆ ಕ್ರಿಕೆಟ್‌ ಹಾಗೂ ಫುಟ್‌ಬಾಲ್‌ನಂತಹ ಗುಂಪು ಆಟಗಳಲ್ಲಿ ಕಷ್ಟ. ಸೋಂಕು ತಪಾಸಣೆ ಮತ್ತು ಆಟಗಾರರ ಕ್ವಾರಂಟೈನ್‌ಗೆ ಒಪ್ಪಬಹುದು. ಆಟದ ಅವಧಿಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟ’ ಎಂದು ಭಾರತದ ಹಿರಿಯ ವೇಗಿ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ADVERTISEMENT

‘ಕೋವಿಡ್‌ನಿಂದ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ವಿದ್ಯಮಾನದಲ್ಲಿ ಕ್ರಿಕೆಟ್‌ ಪುನರಾರಂಭಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದು ಸಕಾಲವಲ್ಲ. ಚೆಂಡು ಮುಟ್ಟಿದ ಬಳಿಕ ಸ್ಯಾನಿಟೈಸರ್ ಬಳಸುವುದು ಪ್ರಾಯೋಗಿಕವಾಗಿ ಸರಿಯಲ್ಲ. ಸುರಕ್ಷಿತ ವಾತಾವರಣದಲ್ಲಿ ಆಟ ನಡೆಯುವ ಸಂದರ್ಭ ಮತ್ತು ಪ್ರತಿಯೊಬ್ಬರನ್ನು ತಪಾಸಣೆ, ಕ್ವಾರಂಟೈನ್‌ಗೆ ಒಳಪಡಿಸುವಾಗ ಈ ಹೆಚ್ಚುವರಿ ಕ್ರಮಗಳ ಅಗತ್ಯವೇನು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಆಕಾಶ್‌ ಚೋಪ್ರಾ ಪ್ರಶ್ನಿಸಿದ್ದಾರೆ.

‘ಕ್ರೀಡಾಂಗಣದಲ್ಲಿ ಸಾಧ್ಯವಾದರೂ ಡ್ರೆಸ್ಸಿಂಗ್‌ ಕೋಣೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಹೇಗೆ? ಇದು ತೀರಾ ಕಷ್ಟ’ ಎಂದು ಅವರು ನುಡಿದರು. ‘ಜುಲೈನಲ್ಲಿ ನಡೆಯುವ ಇಂಗ್ಲೆಂಡ್‌ ಹಾಗೂ ವೆಸ್ಟ್ ಇಂಡೀಸ್‌ ತಂಡಗಳ ನಡುವಿನ ಸರಣಿಯು ಈ ಮಾರ್ಗಸೂಚಿಗಳ ಕುರಿತು ಸ್ಪಷ್ಟತೆ ನೀಡಲಿದೆ’ ಎಂದು ಇಂಗ್ಲೆಂಡ್‌ನ ಅನುಭವಿ ಸ್ಪಿನ್ನರ್‌ ಮಾಂಟಿ ಪನೇಸರ್‌ ಹೇಳಿದ್ದಾರೆ.

‘ನಿಯಮಿತವಾಗಿ ಕೈ ಸ್ವಚ್ಛಗೊಳಿಸಿಕೊಳ್ಳುವಂತಹ ನಿಯಮಗಳು ಪ್ರಾಯೋಗಿಕವಾಗಿ ಸೂಕ್ತವಲ್ಲ. ಬದಲಾಗಿ ತಾಸಿಗೊಮ್ಮೆ ಸ್ಯಾನಿಟೈಸರ್‌ ಬಳಸಬಹುದು’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.