ADVERTISEMENT

ನನ್ನ ತೀರ್ಮಾನಗಳ ಶ್ರೇಯ ಪಡೆದ ’ಅನ್ಯರು‘: ಅಜಿಂಕ್ಯ ರಹಾನೆ

ಆಸ್ಟ್ರೇಲಿಯಾ ಎದುರಿನ ಐತಿಹಾಸಿಕ ಜಯದ ಶ್ರೇಯದ ಕುರಿತು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 14:20 IST
Last Updated 10 ಫೆಬ್ರುವರಿ 2022, 14:20 IST
ಅಜಿಂಕ್ಯ ರಹಾನೆ ಮತ್ತು ರವಿಶಾಸ್ತ್ರಿ  
ಅಜಿಂಕ್ಯ ರಹಾನೆ ಮತ್ತು ರವಿಶಾಸ್ತ್ರಿ     

ನವದೆಹಲಿ: ‘ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾದ ತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿದ್ದೆವು. ಆ ಸಂದರ್ಭದಲ್ಲಿ ನಾನು ತೆಗೆದುಕೊಂಡಿದ್ದ ಕೆಲವು ಪ್ರಮುಖ ತೀರ್ಮಾನಗಳ ಶ್ರೇಯವನ್ನು ಬೇರೆಯವರು ತೆಗೆದುಕೊಂಡರು’ ಎಂದು ಭಾರತ ತಂಡದ ಆಟಗಾರ ಅಜಿಂಕ್ಯ ರಹಾನೆ ಹೇಳಿದರು.

ಗುರುವಾರ ಅವರು ‘ಬ್ಯಾಕ್‌ಸ್ಟೇಜ್ ವಿಥ್ ಬೊರಿಯಾ’ ಕಾರ್ಯಕ್ರಮದಲ್ಲಿ ಅಜಿಂಕ್ಯ ಈ ವಿಷಯವನ್ನು ಬಹಿರಂಗಪಡಿಸಿದರು.

ಆಸ್ಟ್ರೇಲಿಯಾದಲ್ಲಿ 2020–21ರಲ್ಲಿ ಭಾರತವು ಟೆಸ್ಟ್ ಸರಣಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾಗ ರಹಾನೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಏಕೆಂದರೆ ಆ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳನ್ನು ಗಳಿಸಿ ಹೀನಾಯ ಸೋಲನುಭವಿಸಿತ್ತು. ಅದರ ನಂತರ ವಿರಾಟ್ ಕೊಹ್ಲಿ ‘ಪಿತೃತ್ವ ರಜೆ’ಗಾಗಿ ಸ್ವದೇಶಕ್ಕೆ ಮರಳಿದ್ದರು ಉಳಿದ ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದರು.ತಂಡದಲ್ಲಿ ಹಲವು ಅನುಭವಿ ಆಟಗಾರರು ಗಾಯದ ಸಮಸ್ಯೆ ಅನುಭವಿಸಿದಾಗ, ಬೆಂಚ್‌ನಲ್ಲಿದ್ದ ಯುವ ಆಟಗಾರರನ್ನು ಆಡಿದ್ದರು. ತಂಡವು ಐತಿಹಾಸಿಕ ಸಾಧನೆ ಮಾಡಿತ್ತು.

ADVERTISEMENT

‘ಪಂದ್ಯ ನಡೆಯುವಾಗ ಮತ್ತು ಡ್ರೆಸಿಂಗ್ ಕೋಣೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಸಂದರ್ಭೋಚಿತವಾಗಿ ತೆಗೆದುಕೊಂಡಿದ್ದೆ. ಆದರೆ, ಅದರ ಶ್ರೇಯ ಪಡೆಯಲು ನಾನು ಹಂಬಲಿಸಲಿಲ್ಲ. ಶ್ರೇಯವನ್ನು ನನಗೇ ಕೊಡಿ ಎಂದು ಕೇಳುವ ಜಾಯಮಾನವೂ ನನ್ನದಲ್ಲ. ಆದರೆ ಮತ್ಯಾರೋ ಅದನ್ನು ತೆಗೆದುಕೊಂಡು ಹೋದರು’ ಎಂದು ರಹಾನೆ ವಿವರಿಸಿದರು.

‘ಸರಣಿಯ ನಂತರ ಜನರಿಂದ ಮತ್ತು ಶ್ರೇಯ ಪಡೆದವರ ಮುಖೇನ ಮಾಧ್ಯಮಗಳಲ್ಲಿ ಬಂದ ಪ್ರತಿಕ್ರಿಯೆಗಳನ್ನು ನೋಡಿ. ತಾವೇ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾಗಿ ಹೇಳಿದ್ದರು. ಫೀಲ್ಡ್‌ನಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳೇನು ಎಂಬುದು ನನಗೆ ಗೊತ್ತಿದೆ’ ಎಂದರು.

‘ಎಲ್ಲಕ್ಕೂ ಮಿಗಿಲಾಗಿ ನಾವು ಸರಣಿ ಜಯಿಸಿದ್ದು ವಿಶೇಷವಾಗಿತ್ತು ಮತ್ತು ನನಗೆ ಹೆಮ್ಮೆ, ಸಂತಸವನ್ನು ತಂದಿತ್ತು. ಅದಕ್ಕಿಂತ ಇನ್ನೇನು ಬೇಕು’ ಎಂದರು.

ಈ ಸಂದರ್ಭದಲ್ಲಿ ಅವರು ಯಾರ ಹೆಸರನ್ನೂ ಪ್ರಸ್ತಾಪ ಮಾಡಲಿಲ್ಲ.

ಆಗ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಅವರು ಹಲವು ಸಂದರ್ಭಗಳಲ್ಲಿ ತಂಡದ ಸಾಧನೆಯ ಹಿಂದೆ ತಮ್ಮ ಶ್ರಮ ಯೋಜನೆಗಳು ಮತ್ತು ತರಬೇತಿಯ ಪಾತ್ರ ಇರುವುದನ್ನು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.