ADVERTISEMENT

ಎರಡನೇ ಟೆಸ್ಟ್‌ನಲ್ಲೂ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ

ಏಜೆನ್ಸೀಸ್
Published 11 ಏಪ್ರಿಲ್ 2022, 10:34 IST
Last Updated 11 ಏಪ್ರಿಲ್ 2022, 10:34 IST
ಅವಳಿ ಪ್ರಶಸ್ತಿ.... ಪಂದ್ಯ ಶ್ರೇಷ್ಠ ಹಾಗೂ ಸರಣಿಯ ಸರ್ವೋತ್ತಮ ಪ್ರಶಸ್ತಿಯೊಡನೆ ಕೇಶವ ಮಹಾರಾಜ್– ಎಎಫ್‌ಪಿ ಚಿತ್ರ
ಅವಳಿ ಪ್ರಶಸ್ತಿ.... ಪಂದ್ಯ ಶ್ರೇಷ್ಠ ಹಾಗೂ ಸರಣಿಯ ಸರ್ವೋತ್ತಮ ಪ್ರಶಸ್ತಿಯೊಡನೆ ಕೇಶವ ಮಹಾರಾಜ್– ಎಎಫ್‌ಪಿ ಚಿತ್ರ   

ಗೆಬೆರಾ (ದಕ್ಷಿಣ ಆಫ್ರಿಕಾ): ಬಾಂಗ್ಲಾದೇಶ ತಂಡವನ್ನು 80 ರನ್‌ಗಳಿಗೆ ಉರುಳಿಸಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ನಾಲ್ಕನೇ ದಿನವಾದ ಸೋಮವಾರ 332 ರನ್‌ಗಳ ಭಾರಿ ಅಂತರದಿಂದ ಜಯಿಸಿತು. ಆ ಮೂಲಕ ಸರಣಿಯನ್ನು 2–0ಯಿಂದ ಗೆದ್ದುಕೊಂಡಿತು.

ಸೇಂಟ್‌ ಜಾರ್ಜಸ್‌ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಕೇಶವ ಮಹಾರಾಜ್‌ ಮತ್ತು ಸೈಮನ್‌ ಹಾರ್ಮರ್‌ ಅವರು ಎರಡನೇ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನೂ ತಮ್ಮೊಳಗೆ ಹಂಚಿಕೊಂಡರು. ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಇವರಿಬ್ಬರು ಹತ್ತು ವಿಕೆಟ್‌ಗಳನ್ನು ಪಡೆದಿದ್ದರು. ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ 220 ರನ್‌ಗಳಿಂದ ಗೆದ್ದುಕೊಂಡಿತ್ತು.

ಮಹಾರಾಜ್‌ 40 ರನ್ನಿಗೆ 7 ವಿಕೆಟ್‌ ಕಬಳಿಸಿದರೆ, ಹಾರ್ಮರ್‌ 34 ರನ್ನಿಗೆ 3 ವಿಕೆಟ್‌ ಪಡೆದರು. ಗೆಲುವಿಗಾಗಿ 413 ರನ್‌ಗಳ ದೊಡ್ಡ ಗುರಿಯನ್ನು ಎದುರಿಸಿದ ಭಾನುವಾರ ಮೂರನೇ ದಿನದಾಟ ಮುಗಿದಾಗ ಬಾಂಗ್ಲಾದೇಶ 27 ರನ್ನಿಗೆ 3 ವಿಕೆಟ್‌ ಪಡೆದು ಸೋಲಿನತ್ತ ಮುಖಮಾಡಿತ್ತು. ಸೋಮವಾರ ಬೆಳಿಗ್ಗೆ 14 ಓವರುಗಳ ಆಟದಲ್ಲಿ ಬಾಂಗ್ಲಾ ತಂಡ ಶರಣಾಯಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ 453 ರನ್‌ಗಳ ಭಾರಿ ಮೊತ್ತ ಪೇರಿಸಿದ್ದ ಆತಿಥೇಯರು, ಪ್ರವಾಸಿ ಬಾಂಗ್ಲಾ ತಂಡವನ್ನು ಮೊದಲ 217 ರನ್‌ಗಳಿಗೆ ಸೀಮಿತಗೊಳಿಸಿ ಹಿಡಿತ ಸಾಧಿಸಿದ್ದರು.

ಟೆಸ್ಟ್‌ ಸರಣಿಯಲ್ಲಿ ಮುಖಭಂಗ ಅನುಭವಿಸಿದರೂ, ಅದಕ್ಕೆ ಪೂರ್ವದಲ್ಲಿ ನಡೆದ ಏಕದಿ ಸರಣಿಯನ್ನು ಬಾಂಗ್ಲಾ ದೇಶ 2–1 ರಿಂದ ಗೆದ್ದುಕೊಂಡಿದ್ದು ಗಮನಾರ್ಹವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ, ಈ ತಂಡ ಯಾವುದೇ ಮಾದರಿಯಲ್ಲಿ ಗೆದ್ದ ಮೊದಲ ಸರಣಿ ಅದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.