ADVERTISEMENT

ಐಪಿಎಲ್‌ | ಫೀಲ್ಡ್ ಅಂಪೈರ್‌ನಿಂದ ಬ್ಯಾಟ್‌ ಪರಿಶೀಲನೆ

ಪಿಟಿಐ
Published 14 ಏಪ್ರಿಲ್ 2025, 16:13 IST
Last Updated 14 ಏಪ್ರಿಲ್ 2025, 16:13 IST
   

ನವದೆಹಲಿ: ಆಟಗಾರರು ಬ್ಯಾಟ್‌ನ ಗಾತ್ರ ಬದಲಿಸಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಅನುಕೂಲ ಪಡೆಯುವುದನ್ನು ತಪ್ಪಿಸಲು, ಆನ್‌ಫೀಲ್ಡ್‌ ಅಂಪೈರ್‌ಗಳು ಸಂಪ್ರದಾಯ ಮುರಿದು ಹಾಲಿ ಐಪಿಎಲ್‌ನಲ್ಲಿ ಆಟಗಾರರ ಬ್ಯಾಟ್‌ಗಳನ್ನು ತಮಗೆ ಬೇಕೆನಿಸಿದಾಗ ಪರಿಶೀಲನೆ ಮಾಡಲು ಆರಂಭಿಸಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್​ನ 29ನೇ ಪಂದ್ಯದ ವೇಳೆ ಫೀಲ್ಡ್ ಅಂಪೈರ್ ಅವರು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್ ಅನ್ನು ಪರಿಶೀಲಿಸಿದ್ದು ಕಂಡುಬಂತು.

ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಬ್ಯಾಟ್ ಪರಿಶೀಲನೆ ಕೂಡ ಒಂದಾಗಿದೆ. ಫೀಲ್ಡ್ ಅಂಪೈರ್​ಗೆ ಬ್ಯಾಟ್‌ನ ಬಗ್ಗೆ ಸಂದೇಹ ಬಂದರೆ ಮೈದಾನದಲ್ಲೇ ಪರಿಶೀಲಿಸಲು ಅವಕಾಶ ನೀಡಲಾಗಿದೆ.

ADVERTISEMENT

ಈ ಹಿಂದೆ ಇಂಥ ಸಂದೇಹ ಬಂದರೆ ಸಾರ್ವಜನಿಕವಾಗಿ ಅದನ್ನು ಪರಿಶೀಲನೆ ನಡೆಸದೇ ಡ್ರೆಸಿಂಗ್‌ ರೂಮ್‌ನಲ್ಲಿ ಬ್ಯಾಟ್‌ನ ಗಾತ್ರದ ಪರೀಕ್ಷಿಸಲಾಗುತಿತ್ತು.

ಈ ಪಂದ್ಯಕ್ಕೂ ಮುನ್ನ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲೂ ಆರ್‌ಸಿಬಿಯ ಫಿಲ್ ಸಾಲ್ಟ್ ಮತ್ತು ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರ ಬ್ಯಾಟ್‌ಗಳನ್ನೂ ಫೀಲ್ಡ್ ಅಂಪೈರ್‌ಗಳು ಪರಿಶೀಲಿಸಿದ್ದರು.

ಭಾನುವಾರದ ಪಂದ್ಯದ ವೇಳೆ ಪರಿಶೀಲನೆ ಮಾಡಲಾದ ಎಲ್ಲಾ ಬ್ಯಾಟರ್‌ಗಳು ನಿಗದಿ ಪಡಿಸಿದ ಮಿತಿಯಲ್ಲಿದ್ದವು. ಹೀಗಾಗಿ, ಬ್ಯಾಟರ್‌ಗಳಿಗೆ ಅದೇ ಬ್ಯಾಟ್ ಬಳಸಲು ಅವಕಾಶ ನೀಡಲಾಗಿತ್ತು.

ಮಿತಿ ಎಷ್ಟು: ಐಪಿಎಲ್‌ನ ಪಂದ್ಯಗಳಿಗೆ ಬ್ಯಾಟ್‌ನ ಆಯಾಮಗಳಿಗೆ ಮಿತಿ ನಿಗದಿಪಡಿಸಿದೆ. ಅದರಂತೆ ಬ್ಯಾಟ್‌ನ ಅಗಲ 4.25 ಇಂಚುಗಳು ಅಥವಾ 10.8 ಸೆಂಟಿ ಮೀಟರ್‌, ಆಳ 2.64 ಇಂಚು (6.7 ಸೆಂ.ಮೀ), ಅಂಚು 1.56 ಇಂಚು (4.0 ಸೆಂ.ಮೀ) ಮೀರಿರಬಾರದು. ಬ್ಯಾಟ್‌ನ ಉದ್ದ ಹ್ಯಾಂಡಲ್‌ನ ಮೇಲ್ಭಾಗದಿಂದ ಬೇಸ್‌ನವರೆಗೆ 38 ಇಂಚು (96.4 ಸೆಂ.ಮೀ)ಗಿಂತ ಹೆಚ್ಚಿರಬಾರದು. ಇದನ್ನು ಫೀಲ್ಡ್ ಅಂಪೈರ್​ಗಳು ಗೇಜ್ ಬಳಸಿ ಪರಿಶೀಲನೆ ಮಾಡುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.