ADVERTISEMENT

ವಿಜಯ್ ಹಜಾರೆ ಟ್ರೋಫಿ: ಮನೀಷ್ ಬಳಗಕ್ಕೆ ಪುದುಚೇರಿ ಸವಾಲು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 19:34 IST
Last Updated 7 ಡಿಸೆಂಬರ್ 2021, 19:34 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ತಿರುವನಂತಪುರ: ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಕಾತರಿಸುತ್ತಿರುವ ಮನೀಷ್ ಪಾಂಡೆ, ಬುಧವಾರ ಆರಂಭವಾಗಲಿರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಮಂಗಳಪುರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕವು ಪುದುಚೇರಿ ಎದುರು ಕಣಕ್ಕಿಳಿಯಲಿದೆ. ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮನೀಷ್ ಬಳಗವು ರನ್ನರ್ಸ್ ಅಪ್ ಆಗಿತ್ತು. ರೋಚಕ ಫೈನಲ್‌ನಲ್ಲಿ ತಮಿಳುನಾಡು ತಂಡವು ಚಾಂಪಿಯನ್ ಆಗಿತ್ತು.

ಅನುಭವಿ ಬೌಲರ್‌ಗಳಿಲ್ಲದ ತಂಡವನ್ನು ಮನೀಷ್ ಫೈನಲ್‌ನವರೆಗೆ ಮುನ್ನಡೆಸಿದ್ದರು. ತಮ್ಮ ಅಮೋಘ ಬ್ಯಾಟಿಂಗ್ ಮತ್ತು ಚುರುಕಾದ ಫೀಲ್ಡಿಂಗ್‌ನಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿದ್ಯಾಧರ್ ಪಾಟೀಲ, ಎಂ.ಬಿ. ದರ್ಶನ್, ವೈಶಾಖ್ ವಿಜಯಕುಮಾರ್ ಬೌಲಿಂಗ್‌ ವಿಭಾಗದ ಉದಯೋನ್ಮುಖ ಪ್ರತಿಭೆಗಳಾಗಿವೆ. ಅನುಭವಿ ರೋನಿತ್ ಮೋರೆ ಮತ್ತು ಪ್ರಸಿದ್ಧ ಕೃಷ್ಣ ಮರಳಿದರೆ, ತಂಡದ ಬಲ ಹೆಚ್ಚುವ ನಿರೀಕ್ಷೆ ಇದೆ.

ADVERTISEMENT

ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ ಮತ್ತು ಜೆ ಸುಚಿತ್ ತಮಗಿರುವ ಅಲ್ಪಸ್ವಲ್ಪ ಅನುಭವವನ್ನು ಟಿ20 ಟೂರ್ನಿಯಲ್ಲಿ ಸಮರ್ಥವಾಗಿ ಬಳಸಿಕೊಂಡರು. ಆದರೆ, 50–50ರ ಮಾದರಿಯಲ್ಲಿ ಅನುಭವಿ ಆಲ್‌ರೌಂಡರ್, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಶ್ರೇಯಸ್ ಆಡಿದರೆ, ಕಾರ್ಯಪ್ಪಗೆ ಅವಕಾಶ ಸಿಗುವುದು ಸಂಶಯ. ತಿರುವನಂತಪುರದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾದರೆ ಮೂವರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳನ್ನು ಕಣಕ್ಕಿಳಿಸಲು ಪಾಂಡೆ ಮನಸ್ಸು ಮಾಡಬಹುದು.

ಭಾರತ ಎ ತಂಡದಲ್ಲಿರುವ ದೇವದತ್ತ ಪಡಿಕ್ಕಲ್, ಗಾಯಗೊಂಡಿರುವ ಕೆ.ಎಲ್. ರಾಹುಲ್, ಭಾರತ ತಂಡದಲ್ಲಿ ಆಡುತ್ತಿರುವ ಮಯಂಕ್ ಅಗರವಾಲ್ ಲಭ್ಯರಿಲ್ಲ. ಆದ್ದರಿಂದ ಪಾಂಡೆ, ಕರುಣ್ ನಾಯರ್, ರೋಹನ್ ಕದಂ, ಆರ್. ಸಮರ್ಥ್ ಅವರ ಜವಾಬ್ದಾರಿ ಹೆಚ್ಚಿದೆ. ಹೊಸ ಪ್ರತಿಭೆ ಅಭಿನವ್ ಮನೋಹರ್, ಇಲ್ಲಿಯೂ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದಾರೆ.

ಮನೀಷ್ ಬಳಗಕ್ಕೆ ಮೊದಲ ಪಂದ್ಯದಲ್ಲಿ ಪುದುಚೇರಿ ಕಠಿಣ ಸವಾಲು ಒಡ್ಡಲಿಕ್ಕಿಲ್ಲ. ಆದರೆ, ಗುಂಪಿನಲ್ಲಿ ಬಲಾಢ್ಯ ತಂಡಗಳು ಇವೆ. ಆದರೆ, ಪ್ರತಿ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ. ಪುದುಚೇರಿ ತಂಡದಲ್ಲಿ ಕನ್ನಡಿಗ ಪವನ್ ದೇಶಪಾಂಡೆ ಇದ್ದಾರೆ. ತಂಡದ ನಾಯಕತ್ವವನ್ನು ದಾಮೋದರನ್ ರೋಹಿತ್ ವಹಿಸಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡವು ಶುಭಾರಂಭದ ವಿಶ್ವಾಸದಲ್ಲಿದೆ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಆರ್. ಸಮರ್ಥ್, ಕರುಣ್ ನಾಯರ್, ರೋಹನ್ ಕದಂ, ರೋನಿತ್ ಮೋರೆ, ಶ್ರೇಯಸ್ ಗೋಪಾಲ್, ಬಿ.ಆರ್. ಶರತ್, ವಿ. ಕೌಶಿಕ್, ಜೆ. ಸುಚಿತ್, ಮನೋಜ್ ಭಾಂಡಗೆ, ಕೆ.ಸಿ. ಕಾರ್ಯಪ್ಪ, ರಿತೇಶ್ ಭಟ್ಕಳ, ಅಭಿನವ್ ಮನೋಹರ್, ಕೆ.ವಿ.ಸಿದ್ಧಾರ್ಥ್, ಅನಿರುದ್ಧ ಜೋಶಿ, ಡಿ. ನಿಶ್ಚಲ್, ಎನ್. ನಿಶ್ಚಿತ್, ವಿದ್ಯಾಧರ್ ಪಾಟೀಲ, ಎಂ.ಬಿ. ದರ್ಶನ್, ವೈಶಾಖ್ ವಿಜಯಕುಮಾರ್, ಪ್ರಸಿದ್ಧ ಕೃಷ್ಣ, ಆದಿತ್ಯ ಸೋಮಣ್ಣ.

ಪುದುಚೇರಿ: ದಾಮೋದರನ್ ರೋಹಿತ್ (ನಾಯಕ), ಪಾರಸ್ ಡೋಗ್ರಾ, ವಿಘ್ನೇಶ್ವರನ್ ಮಾರಿಮುತ್ತು, ಸುಬ್ರಮಣಿಯನ್ ಆನಂದ್, ಪ್ರೇಮರಾಜ್ ರಾಜವೇಲು, ಇಕ್ಲಾಸ್ ನಹಾ, ಪವನ್ ದೇಶಪಾಂಡೆ, ಎಸ್. ಸುರೇಶ್ ಕುಮಾರ್, ಫಬೀದ್ ಅಹಮದ್, ಎ. ಅರವಿಂದರಾಜ್, ಕಾರ್ತಿಕ್ ಸುಕುಮಾರನ್, ರಾಮಚಂದ್ರನ್ ರಘುಮಪತಿ, ಸಾಗರ್ ಉದೇಶಿ, ರಘು ಶರ್ಮಾ, ಕಣ್ಣನ್ ವಿಘ್ನೇಸ್, ಅಲಘಾ ಪ್ರತಿಭನ್, ಸಾಗರ್ ತ್ರಿವೇದಿ, ಸುಭೋದ್ ಭಟ್ಟಿ, ಶ್ರೀಧರ್ ಅಶ್ವಥ್

ಬುಧವಾರ ಇನ್ನುಳಿದ ಪಂದ್ಯಗಳು (ಬಿ ಗುಂಪು)

ಬರೋಡಾ–ಬಂಗಾಳ (ಗ್ರೀನ್‌ಫೀಲ್ಡ್ ಕ್ರೀಡಾಂಗಣ)

ತಮಿಳುನಾಡು–ಮುಂಬೈ (ಸೇಂಟ್ ಝೇವಿಯರ್ ಕಾಲೇಜು ಮೈದಾನ)

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.