ADVERTISEMENT

ವಿನಯ್–ರೋಹಿತ್ ಮಿಂಚು; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ

ಗಿರೀಶದೊಡ್ಡಮನಿ
Published 16 ಜನವರಿ 2019, 12:33 IST
Last Updated 16 ಜನವರಿ 2019, 12:33 IST
ಕೆ.ವಿ. ಸಿದ್ಧಾರ್ಥ್  ಬ್ಯಾಟಿಂಗ್ ವೈಖರಿ  –ಸಂಗ್ರಹ ಚಿತ್ರ/ಪ್ರಜಾವಾಣಿ
ಕೆ.ವಿ. ಸಿದ್ಧಾರ್ಥ್  ಬ್ಯಾಟಿಂಗ್ ವೈಖರಿ  –ಸಂಗ್ರಹ ಚಿತ್ರ/ಪ್ರಜಾವಾಣಿ   

ಬೆಂಗಳೂರು: ಕೊನೆಯ ವಿಕೆಟ್ ಜೊತೆಯಾಟದಲ್ಲಿ ಆರ್. ವಿನಯಕುಮಾರ್ ಮತ್ತು ರೋನಿತ್ ಮೋರೆ ಸೇರಿಸಿದ ತೊಂಬತ್ತೇಳು ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮಹತ್ವದ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ ತಂಡವು ಗಳಿಸಿದ 224 ರನ್‌ಗಳ ಮೊದಲ ಇನಿಂಗ್ಸ್‌ ಮೊತ್ತದ ಸವಾಲು ಮೀರಲು ಆತಿಥೇಯ ಬಳಗವು ಕಷ್ಟದ ಹಾದಿ ಸವೆಸಿತು. ರಾಜಸ್ಥಾನದ ಸ್ಪಿನ್ನರ್ ರಾಹುಲ್ ಚಾಹರ್ ಮತ್ತು ಮಧ್ಯಮವೇಗಿ ತನ್ವಿರ್ ಉಲ್ ಹಕ್ ಅವರ ದಾಳಿಗೆ 166 ರನ್‌ ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡ ಕರ್ನಾಟಕ ಹಿನ್ನಡೆಯ ಭೀತಿ ಎದುರಿಸಿತ್ತು.

ಎರಡು ತಾಸು, 16 ನಿಮಿಷಗಳ ತಾಳ್ಮೆಯುತ ಪಾಲುದಾರಿಕೆ ಆಟವಾಡಿದ ವಿನಯ್ (ಔಟಾಗದೆ 83) ಮತ್ತು ರೋನಿತ್ ಮೋರೆ (10; 59 ಎಸೆತ; 1ಬೌಂಡರಿ) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ರಾಜಸ್ಥಾನ ತಂಡಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇದರಿಂದಾಗಿ ಕರ್ನಾಟಕ ತಂಡವು 87.4 ಓವರ್‌ಗಳಲ್ಲಿ 263 ರನ್‌ ಗಳಿಸಿತು. 39 ರನ್‌ಗಳ ಮುನ್ನಡೆ ಸಾಧಿಸಿತು. ಸಂಜೆ ಎರಡನೇ ಇನಿಂಗ್ಸ್‌ ಆರಂಭಿಸಿದ ರಾಜಸ್ಥಾನ ತಂಡವು ಮೂರು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 11 ರನ್‌ ಗಳಿಸಿದೆ.

ADVERTISEMENT

ಸಂಕಷ್ಟದ ಹಾದಿ: ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕವು ವಿಕೆಟ್‌ ನಷ್ಟವಿಲ್ಲದೇ 12 ರನ್‌ ಗಳಿಸಿತ್ತು. ಆದರೆ ಎರಡನೇ ದಿನದ ಊಟದ ವಿರಾಮದ ವೇಳೆಗೆ 38 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 115 ರನ್‌ ಗಳಿಸಿತು. ಇನಿಂಗ್ಸ್ ಲೀಡ್ ಪಡೆಯಲು ಇನ್ನೂ 109 ರನ್‌ ಗಳಿಸಬೇಕಿತ್ತು.ಅರ್ಧಶತಕ ಗಳಿಸಿರುವ ಕೆ.ವಿ. ಸಿದ್ಧಾರ್ಥ್ (ಬ್ಯಾಟಿಂಗ್ 50 ) ಮತ್ತು ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದರು.

ರಾಜಸ್ಥಾನ ತಂಡದ ತನ್ವೀರ್ ಉಲ್ ಹಕ್ ಎರಡು ವಿಕೆಟ್ ಗಳಿಸಿದರು. ದೀಪಕ್ ಚಾಹರ್ ಮತ್ತು ರಾಹುಲ್ ಚಾಹರ್ ತಲಾ ಒಂದು ವಿಕೆಟ್ ಗಳಿಸಿದರು. ಅನುಭವಿ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್ (32 ರನ್), ಕರುಣ್ ನಾಯರ್ (4 ರನ್) ಮತ್ತು ನಾಯಕ ಮನೀಷ್ ಪಾಂಡೆ (7 ರನ್) ಬೇಗನೆ ಔಟಾದರು. ಇದರಿಂದಾಗಿ ತಂಡದ ರನ್‌ ಗಳಿಕೆ ಕುಂಠಿತವಾಯಿತು. ಆದರೆ ಎರಡು ಜೀವದಾನ ಪಡೆದ ಕೆ.ವಿ. ಸಿದ್ಧಾರ್ಥ್ ಅರ್ಧಶತಕ ಗಳಿಸಿದರು. ವಿರಾಮದ ನಂತರ ಕೇವಲ 76 ರನ್‌ಗಳು ಸೇರುವಷ್ಟರಲ್ಲಿ ಐದು ವಿಕೆಟ್‌ಗಳು ಪತನವಾದವು. ಈ ಹಂತದಲ್ಲಿ ಜೊತೆಗೂಡಿದ ವಿನಯ್ ಮತ್ತು ರೋನಿತ್ ಆಟ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಲೈನ್ ಮತ್ತು ಲೆಂಗ್ತ್‌ ಅನ್ನು ಕಾಪಾಡಿಕೊಂಡು ಬೌಲಿಂಗ್ ಮಾಡುತ್ತಿದ್ದ ರಾಜಸ್ಥಾನದ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ವಿನಯ್ ಬ್ಯಾಟಿಂಗ್‌ ಅನ್ನು ಹೆಚ್ಚು ಹೊತ್ತು ತಮ್ಮಬಳಿಯೇ ಇಟ್ಟುಕೊಂಡರು.

ಆಲೂರಿನಲ್ಲಿ ನಡೆದಿದ್ದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಛತ್ತೀಸಗಡ ಎದುರು ಕೂಡ ವಿನಯ್ ಮತ್ತು ರೋನಿತ್ ಪಾಲುದಾರಿಕೆ ಆಟವು ಮಹತ್ವದ ಪಾತ್ರ ವಹಿಸಿತ್ತು. ಆ ಇನಿಂಗ್ಸ್‌ನಲ್ಲಿ ವಿನಯ್ 90 ರನ್‌ ಗಳಿಸಿದ್ದರು. ರೋನಿತ್ ಹತ್ತು ರನ್ ಗಳಿಸಿದ್ದರು. ಇಲ್ಲಿಯೂ ಹತ್ತು ರನ್ ಹೊಡೆದ ಬೆಳಗಾವಿ ಹುಡುಗ ರೋನಿತ್ ಔಟಾದರು.

ಸ್ಕೋರ್

ಮೊದಲ ಇನಿಂಗ್ಸ್

ರಾಜಸ್ಥಾನ 224 (77.1 ಓವರ್‌ಗಳಲ್ಲಿ)

ಕರ್ನಾಟಕ ; 263 (87.4 ಓವರ್‌ಗಳಲ್ಲಿ)

ಆರ್. ಸಮರ್ಥ್ ಎಲ್‌ಬಿಡಬ್ಲ್ಯು ಬಿ ರಾಹುಲ್ ಚಾಹರ್ 32

ಡೇಗಾ ನಿಶ್ಚಲ್ ಸಿ ಚೇತನ್ ಬಿಷ್ಠ್ ಬಿ ದೀಪಕ್ ಚಾಹರ್ 06

ಕೆ.ವಿ. ಸಿದ್ಧಾರ್ಥ್ ಬಿ ತನ್ವೀರ್ ಉಲ್ ಹಕ್ 50

ಕರುಣ್ ನಾಯರ್ ಸಿ ಮತ್ತು ಬಿ ತನ್ವೀರ್ ಉಲ್ ಹಕ್ 04

ಮನೀಷ್ ಪಾಂಡೆ ಬಿ ತನ್ವೀರ್ ಉಲ್ ಹಕ್ 07

ಶ್ರೇಯಸ್ ಗೋಪಾಲ್ ಎಲ್‌ಬಿಡಬ್ಲ್ಯು ಬಿ ದೀಪಕ್ ಚಾಹರ್ 14

ಬಿ.ಆರ್. ಶರತ್ ಸಿ ಮಹಿಪಾಲ್ ಲೊಮ್ರೊರ್ ಬಿ ರಾಹುಲ್ ಚಾಹರ್ 04

ಕೃಷ್ಣಪ್ಪ ಗೌತಮ್ ಬಿ ರಾಹುಲ್ ಚಾಹರ್ 19

ಆರ್. ವಿನಯಕುಮಾರ್ ಔಟಾಗದೆ 83

ಅಭಿಮನ್ಯು ಮಿಥುನ್ ಬಿ ದೀಪಕ್ ಚಾಹರ್ 08

ರೋನಿತ್ ಮೋರೆ ಎಲ್‌ಬಿಡಬ್ಲ್ಯು ಬಿ ರಾಹುಲ್ ಚಾಹರ್ 10

ಇತರೆ: 13 (ಬೈ 8, ಲೆಗ್‌ಬೈ 5)

ವಿಕೆಟ್ ಪತನ: 1–17 (ನಿಶ್ಚಲ್ ; 8.3), 2–61 (ಸಮರ್ಥ್; 21.5), 3–76 (ಕರುಣ್; 26.6), 4–90 (ಮನೀಷ್; 28.5), 5–119 (ಸಿದ್ಧಾರ್ಥ್; 40.1) , 6–124 (ಶರತ್; 41.2), 7–152 (ಗೌತಮ್; 51.1), 8–155 (ಶ್ರೇಯಸ್; 51.5), 9–166 (ಮಿಥುನ್; 56.3), 10–263 (ರೋನಿತ್; 87.4)

ಬೌಲಿಂಗ್

ದೀಪಕ್ ಚಾಹರ್ 16–2–62–2, ಅನಿಕೇತ್ ಚೌಧರಿ 20–5–37–0, ರಾಹುಲ್ ಚಾಹರ್ 26.1–4–93–5, ತನ್ವೀರ್ ಉಲ್ ಹಕ್ 20–3–50–3, ಮಹಿಪಾಲ್ ಲೊಮ್ರೊರ್ 5–1–8–0.

ಎರಡನೇ ಇನಿಂಗ್ಸ್

ರಾಜಸ್ಥಾನ

ವಿಕೆಟ್ ನಷ್ಟವಿಲ್ಲದೇ 11 (3 ಓವರ್‌ಗಳಲ್ಲಿ)

ಅಮಿತ್ ಗೌತಮ್ ಔಟಾಗದೆ 11

ಚೇತನ್ ಬಿಷ್ಠ್ ಔಟಾಗದೆ 00

ಬೌಲಿಂಗ್

ಕೆ. ಗೌತಮ್ 2–0–6–0, ಅಭಿಮನ್ಯು ಮಿಥುನ್ 1–0–5–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.