ADVERTISEMENT

ಮೆಕ್‌ಲೀನ್‌ ಪಾರ್ಕ್‌ನಲ್ಲಿ ಮಿಂಚಿದ ಮಂದಾನ

ನ್ಯೂಜಿಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯ: 9 ವಿಕೆಟ್‌ಗಳಿಂದ ಗೆದ್ದ ಭಾರತ: ಏಕ್ತಾ, ಪೂನಮ್‌ಗೆ ತಲಾ ಮೂರು ವಿಕೆಟ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 18:24 IST
Last Updated 24 ಜನವರಿ 2019, 18:24 IST
ಸ್ಮೃತಿ ಮಂದಾನ
ಸ್ಮೃತಿ ಮಂದಾನ   

ನೇಪಿಯರ್‌: ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ ಅವರ ಅಬ್ಬರಕ್ಕೆ ಗುರುವಾರ ಮೆಕ್‌ಲೀನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳು ಬೆದರಿದರು.

ಇವರ ಅಮೋಘ ಜೊತೆಯಾಟದ ಬಲದಿಂದ ಮಿಥಾಲಿ ರಾಜ್‌ ಬಳಗ, ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ ಏಕ್ತಾ ಬಿಷ್ಠ್‌ (32ಕ್ಕೆ3) ಮತ್ತು ಪೂನಮ್‌ ಯಾದವ್‌ (42ಕ್ಕೆ3) ಅವರ ದಾಳಿಗೆ ಬೆಚ್ಚಿತು. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದರಿಂದ ತಂಡ 48.4 ಓವರ್‌ಗಳಲ್ಲಿ 192ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

ಸುಲಭ ಗುರಿಯನ್ನು ಭಾರತ ತಂಡ 33 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಮುಟ್ಟಿತು. ಇದಕ್ಕೆ ಕಾರಣವಾಗಿದ್ದು ಮಂದಾನ ಮತ್ತು ಜೆಮಿಮಾ ಅವರ ಮನಮೋಹಕ ಆಟ.

ಆತಿಥೇಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿತು. ಮೊದಲ ವಿಕೆಟ್‌ಗೆ 190ರನ್‌ ಸೇರಿಸಿ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿತು.

ಎರಡು ಗಂಟೆ ಕ್ರೀಸ್‌ನಲ್ಲಿದ್ದ ಮಂದಾನ, 104 ಎಸೆತಗಳನ್ನು ಎದುರಿಸಿ 105ರನ್‌ ಬಾರಿಸಿದರು. ಬೌಂಡರಿ (9) ಮತ್ತು ಸಿಕ್ಸರ್‌ಗಳ (3) ಮೂಲಕವೇ 54ರನ್‌ ಗಳಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿ. ಎಡಗೈ ಬ್ಯಾಟ್ಸ್‌ವುಮನ್‌ ಸ್ಮೃತಿ, ಏಕದಿನ ಮಾದರಿಯಲ್ಲಿ ನಾಲ್ಕನೇ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದರು.

19 ವರ್ಷ ವಯಸ್ಸಿನ ಜೆಮಿಮಾ, ತಾಳ್ಮೆಯ ಆಟಕ್ಕೆ ಮೊರೆ ಹೋದರು. 124 ನಿಮಿಷ ಕ್ರೀಸ್‌ನಲ್ಲಿದ್ದ ಅವರು 94 ಎಸೆತಗಳಲ್ಲಿ 81ರನ್‌ ಬಾರಿಸಿ ಅಜೇಯವಾಗುಳಿದರು. ಇದರಲ್ಲಿ ಒಂಬತ್ತು ಬೌಂಡರಿಗಳು ಸೇರಿದ್ದವು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 48.4 ಓವರ್‌ಗಳಲ್ಲಿ 192 (ಸೂಜಿ ಬೇಟ್ಸ್‌ 36, ಸೋಫಿ ಡಿವೈನ್‌ 28, ಆ್ಯಮಿ ಸಟ್ಟರ್‌ವೇಟ್‌ 31, ಅಮೇಲಿಯಾ ಕೆರ್‌ 28, ಹನ್ಹಾ ರೋವ್‌ 25; ಶಿಖಾ ಪಾಂಡೆ 38ಕ್ಕೆ1, ಏಕ್ತಾ ಬಿಷ್ಠ್‌ 32ಕ್ಕೆ3, ದೀಪ್ತಿ ಶರ್ಮಾ 27ಕ್ಕೆ2, ಪೂನಮ್‌ ಯಾದವ್‌ 42ಕ್ಕೆ3).

ಭಾರತ: 33 ಓವರ್‌ಗಳಲ್ಲಿ 1 ವಿಕೆಟ್‌ಗೆ 193 (ಜೆಮಿಮಾ ರಾಡ್ರಿಗಸ್‌ ಔಟಾಗದೆ 81, ಸ್ಮೃತಿ ಮಂದಾನ 105; ಅಮೇಲಿಯಾ ಕೆರ್‌ 33ಕ್ಕೆ1).

ಫಲಿತಾಂಶ: ಭಾರತಕ್ಕೆ 9 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.