ಮುಂಬೈ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ನಾಯಕನಾಗಿ ಆಯ್ಕೆಯಾಗುವ ಮೂಲಕ ಭಾರತ ತಂಡವನ್ನು ಮುನ್ನೆಡೆಸುತ್ತಿರುವ ಐದನೇ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ.
ಕೇವಲ 32 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಗಿಲ್ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಮಾಡಲಾಗಿದೆ.
ಅತಿ ಕಿರಿಯ ವಯಸ್ಸಿನಲ್ಲೇ ಭಾರತ ತಂಡವನ್ನು ಮುನ್ನೆಡೆಸಿರುವ ಹೆಗ್ಗಳಿಕೆಯು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರಿನಲ್ಲಿದೆ. 1962ರಲ್ಲಿ ಕೇವಲ 21ವರ್ಷ(77 ದಿನ) ವಯಸ್ಸಿನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ತಂಡವನ್ನು ಮುನ್ನೆಡೆಸಿದ್ದರು.
ಅವರ ನಂತರ ಅತಿ ಕಿರಿಯ ನಾಯಕ ಎಂಬ ಹೆಗ್ಗಳಿಕೆಯು ಕ್ರಿಕೆಟ್ ದೇವರು ‘ಸಚಿನ್ ತೆಂಡೂಲ್ಕರ್’ಅವರ ಹೆಸರಿನಲ್ಲಿದೆ. ಅವರು 1996ರಲ್ಲಿ 23ವರ್ಷ(169 ದಿನ) ವಯಸ್ಸಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ನಾಯಕನಾಗಿ ಆಯ್ಕೆಯಾಗಿದ್ದರು.
ಕಪಿಲ್ ದೇವ್ ಅವರು 24ವರ್ಷ(48 ದಿನ) ವಯಸ್ಸಿನಲ್ಲೇ ಟೆಸ್ಟ್ ತಂಡದ ನಾಯಕರಾಗಿದ್ದರು. ಭಾರತ ತಂಡದ ಮಾಜಿ ಕೋಚ್ ಆಗಿರುವ ರವಿ ಶಾಸ್ತ್ರಿಯವರು ಕೂಡ 25ವರ್ಷ(229 ದಿನ) ವಯಸ್ಸಿನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ತಂಡವನ್ನು ಮುನ್ನೆಡೆಸಿದ್ದರು.
ಇದೀಗ 25ವರ್ಷ(285 ದಿನ) ವಯಸ್ಸಿನ ಶುಭಮನ್ ಗಿಲ್ ಅವರು ಜೂನ್ 20ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಅವರಂತಹ ಅನುಭವಿ ಆಟಗಾರರ ನಿವೃತ್ತಿಯ ನಂತರ ಯುವ ಆಟಗಾರರೇ ಕೂಡಿರುವ ತಂಡವನ್ನು ಮುನ್ನೆಡೆಸುವ ಜವಾಬ್ದಾರಿಯು ಗಿಲ್ ಅವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.