ADVERTISEMENT

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಜೆದಿನಾಕ್‌ ವಿದಾಯ

ಏಜೆನ್ಸೀಸ್
Published 1 ಅಕ್ಟೋಬರ್ 2018, 17:11 IST
Last Updated 1 ಅಕ್ಟೋಬರ್ 2018, 17:11 IST
ಮೈಕಲ್‌ ಜಾನ್‌ ಜೆದಿನಾಕ್‌ (ಮಧ್ಯ)
ಮೈಕಲ್‌ ಜಾನ್‌ ಜೆದಿನಾಕ್‌ (ಮಧ್ಯ)   

ಸಿಡ್ನಿ: ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಜಾನ್‌ ಜೆದಿನಾಕ್‌ ಅವರು ಸೋಮವಾರ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ.

34 ವರ್ಷ ವಯಸ್ಸಿನ ಜೆದಿನಾಕ್‌ 25 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗರೂಗಳ ನಾಡಿನ ತಂಡ 2015ರ ಎಎಫ್‌ಸಿ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. ಅವರು 2014 ಮತ್ತು 2018ರ ಫಿಫಾ ವಿಶ್ವಕಪ್‌ಗಳಲ್ಲೂ ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದ್ದರು.

ಈ ಬಾರಿಯ ವಿಶ್ವಕಪ್‌ ಅರ್ಹತಾ ಟೂರ್ನಿಯ ಹೊಂಡುರಸ್‌ ಎದುರಿನ ಪಂದ್ಯದಲ್ಲಿ ಜೆದಿನಾಕ್‌ ‘ಹ್ಯಾಟ್ರಿಕ್‌’ ಗೋಲು ದಾಖಲಿಸಿ ಮಿಂಚಿದ್ದರು.

ADVERTISEMENT

2008ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಜೆದಿನಾಕ್‌, ಆಸ್ಟ್ರೇಲಿಯಾ ಪರ 79 ಪಂದ್ಯಗಳನ್ನು ಆಡಿದ್ದು 20 ಗೋಲುಗಳನ್ನು ದಾಖಲಿಸಿದ್ದಾರೆ.

2016ರಲ್ಲಿ ಆ್ಯಷ್ಟನ್‌ ವಿಲ್ಲಾ ಕ್ಲಬ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದ ಅವರು ಈ ಕ್ಲಬ್‌ ಪರ 69 ಪಂದ್ಯಗಳನ್ನು ಆಡಿದ್ದಾರೆ.

‘ಕುಟುಂಬದವರು ಹಾಗೂ ಸ್ನೇಹಿತರ ಜೊತೆ ಸುದೀರ್ಘ ಚರ್ಚೆ ನಡೆಸಿ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೇನೆ. ಕ್ಲಬ್‌ ಫುಟ್‌ಬಾಲ್‌ನತ್ತ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ನೋವಿನಿಂದಲೇ ಈ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಜೆದಿನಾಕ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.