ADVERTISEMENT

ಬಾಯರ್ನ್ ಮ್ಯೂನಿಚ್‌ ತಂಡಕ್ಕೆ ಜರ್ಮನ್‌ ಕಪ್‌

ಏಜೆನ್ಸೀಸ್
Published 5 ಜುಲೈ 2020, 13:15 IST
Last Updated 5 ಜುಲೈ 2020, 13:15 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಬೇಯರ್ನ್‌ ಮ್ಯೂನಿಚ್‌ ಆಟಗಾರರು– ಎಎಫ್‌ಪಿ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ಬೇಯರ್ನ್‌ ಮ್ಯೂನಿಚ್‌ ಆಟಗಾರರು– ಎಎಫ್‌ಪಿ ಚಿತ್ರ   

ಬರ್ಲಿನ್‌: ಬಾಯರ್ನ್ ಮ್ಯೂನಿಚ್‌ ತಂಡವು 20ನೇ ಬಾರಿ ಜರ್ಮನ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಶನಿವಾರ ಆ ತಂಡ 4–2ರಿಂದ ಬೇಯರ್‌ ಲೆವರ್‌ಕುಸೆನ್‌ ಎದುರು ಗೆದ್ದಿತು.

ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿದ್ದರಿಂದ ಆಟಗಾರರು ಖಾಲಿ ಕ್ರೀಡಾಂಗಣದಲ್ಲಿ ಜಯದ ಸಂಭ್ರಮ ಆಚರಿಸಿದರು.

ಫೈನಲ್‌ ಪಂದ್ಯದಲ್ಲಿ ವಿಜೇತ ತಂಡದ ಪರ ರಾಬರ್ಟ್‌ ಲೆವಂಡೊವಸ್ಕಿ (59 ಹಾಗೂ 89ನೇ ನಿಮಿಷ) ಎರಡು ಗೋಲು ಬಾರಿಸಿ ಮಿಂಚಿದರು. ಇದರೊಂದಿಗೆ ಈ ಋತುವಿನಲ್ಲಿ 50ನೇ ಗೋಲು ಗಳಿಸಿದ ಸಂಭ್ರಮ ಅವರದಾಯಿತು. ಡೇವಿಡ್‌ ಅಲಾಬಾ (16ನೇ ನಿಮಿಷ) ಹಾಗೂ ಸೆಜ್‌ ನ್ಯಾಬ್ರಿ (24ನೇ ನಿಮಿಷ) ಗೋಲು ಗಳಿಸಿ ಜಯದಲ್ಲಿ ಕೊಡುಗೆ ನೀಡಿದರು.

ADVERTISEMENT

ರನ್ನರ್‌ ಅಪ್‌ ಬಾಯರ್ನ್ ತಂಡದ ಸ್ವೆನ್‌ ಬೆಂಡರ್‌ (63ನೇ ನಿಮಿಷ) ಹಾಗೂ ಕಾಯ್‌ ಹವೆರ್ಟ್ಜ್‌ (90+5 ಪೆನಾಲ್ಟಿ) ಕಾಲ್ಚಳಕ ತೋರಿದರು.

75,000 ಪ್ರೇಕ್ಷಕರ ಸಾಮರ್ಥ್ಯದ ಬರ್ಲಿನ್‌ನ ಒಲಿಂಪಿಯಾಸ್ಟೇಡಿಯನ್‌ ಅಂಗಣದಲ್ಲಿ ಇದ್ದದ್ದು, ಜರ್ಮನಿ ತಂಡದ ಕೋಚ್‌ ಸೇರಿ 691 ಮಂದಿ ಮಾತ್ರ.

‘ಇಂತಹ ದೊಡ್ಡ ಕ್ರೀಡಾಂಗಣ ಹಾಗೂ ಮಹತ್ವದ ಸಂದರ್ಭದಲ್ಲಿ ಅಭಿಮಾನಿಗಳ ಅನುಪಸ್ಥಿತಿ ನೋವು ತರಿಸಿದೆ’ ಎಂದು ಬಾಯರ್ನ್ ತಂಡದ ಫಾವರ್ಡ್‌ ಆಟಗಾರ ಥಾಮಸ್‌ ಮುಲ್ಲರ್‌ ನುಡಿದರು.

ಬಂಡೆಸ್‌ಲಿಗಾ ಟೂರ್ನಿಯಲ್ಲೂ ಬಾಯರ್ನ್ ವಿಜಯದ ಕಿರೀಟ ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.