ADVERTISEMENT

ಫುಟ್‌ಬಾಲ್‌: ಭಾರತ ಮಹಿಳಾ ತಂಡದ ಜಯಭೇರಿ

ಪಿಟಿಐ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಹಾಂಕಾಂಗ್‌ ಎದುರಿನ ಪಂದ್ಯದಲ್ಲಿ ಗೆದ್ದ ಭಾರತ ತಂಡದವರು
ಹಾಂಕಾಂಗ್‌ ಎದುರಿನ ಪಂದ್ಯದಲ್ಲಿ ಗೆದ್ದ ಭಾರತ ತಂಡದವರು   

ಹಾಂಕಾಂಗ್‌ (ಪಿಟಿಐ): ಭಾರತದ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ತಂಡದವರು ಹಾಂಕಾಂಗ್‌ ಪ್ರವಾಸದ ನಾಲ್ಕನೇ ಪಂದ್ಯದಲ್ಲೂ ಜಯಭೇರಿ ಮೊಳಗಿಸಿದ್ದಾರೆ.

ಶನಿವಾರ ನಡೆದ ಹಣಾಹಣಿಯಲ್ಲಿ ಭಾರತದ ವನಿತೆಯರು 4–1 ಗೋಲುಗಳಿಂದ ಹಾಂಕಾಂಗ್‌ನ 18 ವರ್ಷದೊಳಗಿನವರ ತಂಡವನ್ನು ಪರಾಭವಗೊಳಿಸಿದರು.

ಮುಂದಿನ ವರ್ಷ ನಡೆಯುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡದವರು ನಾಲ್ಕು ಪಂದ್ಯಗಳಿಂದ ಒಟ್ಟು 18 ಗೋಲುಗಳನ್ನು ದಾಖಲಿಸಿದರು. ಎದುರಾಳಿಗಳಿಗೆ ಕೇವಲ ಮೂರು ಗೋಲುಗಳನ್ನು ಬಿಟ್ಟುಕೊಟ್ಟರು.

ADVERTISEMENT

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ವನಿತೆಯರು ಮೊದಲಾರ್ಧದಲ್ಲಿ ಎರಡು ಗೋಲು ದಾಖಲಿಸಿ ಮಿಂಚಿದರು. 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವೇಕಾ, ಪ್ರವಾಸಿ ಪಡೆಯ ಖಾತೆ ತೆರೆದರು. 32ನೇ ನಿಮಿಷದಲ್ಲಿ ಲಿಂಡಾ ಕಾಲ್ಚಳಕ ತೋರಿದರು.

ದ್ವಿತೀಯಾರ್ಧದ ಶುರುವಿನಲ್ಲಿ ಆತಿಥೇಯ ತಂಡಕ್ಕೆ ಪೆನಾಲ್ಟಿ ಲಭಿಸಿತು. 60ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಚಾನ್‌, ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ನಂತರ ಭಾರತವು ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 65ನೇ ನಿಮಿಷದಲ್ಲಿ ಅಂಜು ಚೆಂಡನ್ನು ಗುರಿ ಮುಟ್ಟಿಸಿ ಪ್ರವಾಸಿ ಬಳಗದ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು. 77ನೇ ನಿಮಿಷದಲ್ಲಿ ಕಿರಣಾ ಗೋಲು ಗಳಿಸಿ ಭಾರತದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.