ನವದೆಹಲಿ: ತಜಕಿಸ್ತಾನ ಮತ್ತು ಕಿರ್ಗಿಸ್ತಾನ ವಿರುದ್ಧದ ಮುಂಬರುವ ಸೌಹಾರ್ದ ಫುಟ್‌ಬಾಲ್ ಪಂದ್ಯಗಳಿಗೆ 23 ಆಟಗಾರರನ್ನು ಒಳಗೊಂಡ ಭಾರತ 23 ವರ್ಷದೊಳಗಿನವರ ತಂಡವನ್ನು ಮುಖ್ಯ ಕೋಚ್ ನೌಶಾದ್ ಮೂಸಾ ಪ್ರಕಟಿಸಿದ್ದಾರೆ. ಕರ್ನಾಟಕದ ಮಿಡ್‌ಫೀಲ್ಡರ್ ವಿನೀತ್ ವೆಂಕಟೇಶ್ ಸ್ಥಾನ ಪಡೆದಿದ್ದಾರೆ.
ಜೂನ್ 1ರಿಂದ ಕೋಲ್ಕತ್ತದ ಎಐಎಫ್‌ಎಫ್ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಆಟಗಾರರು ಸೋಮವಾರ ಸಂಜೆ ತಜಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಎಎಫ್‌ಸಿ (23 ವರ್ಷದೊಳಗಿನವರ) 2026ರ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಿಗೆ ಪೂರ್ವಸಿದ್ಧತೆಯ ಭಾಗವಾಗಿ ಸೌಹಾರ್ದ ಪಂದ್ಯ ನಡೆಯಲಿದೆ.
ಶಿಬಿರದಲ್ಲಿದ್ದ ಒಟ್ಟು 29 ಆಟಗಾರರ ಪೈಕಿ 20 ಮಂದಿ ಮತ್ತು ಸೀನಿಯರ್ ತಂಡದ ಮೂವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಹೇಲ್ ಅಹ್ಮದ್ ಭಟ್, ಆಯುಷ್ ಚೆಟ್ರಿ ಮತ್ತು ಅಭಿಷೇಕ್ ಸಿಂಗ್ ಅವರು ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು.
ಭಾರತ ತಂಡವು ಜೂನ್ 18ರಂದು ತಜಕಿಸ್ತಾನ ವಿರುದ್ಧ ಮತ್ತು 21ರಂದು ಕಿರ್ಗಿಸ್ತಾನ ವಿರುದ್ಧ ಆಡಲಿದೆ. ಎರಡೂ ಪಂದ್ಯಗಳು ತಜಕಿಸ್ತಾನನ ರಾಜಧಾನಿ ದುಶಾನ್ಬೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಹಿಸೋರ್ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.