ADVERTISEMENT

ಸೀರಿ ‘ಎ’ ಫುಟ್‌ಬಾಲ್‌: ಸೋಲು ತಪ್ಪಿಸಿದ ರೊನಾಲ್ಡೊ

ಅಟ್ಲಾಂಟ ಎದುರು ಡ್ರಾ ಮಾಡಿಕೊಂಡ ಯುವೆಂಟಸ್‌

ಏಜೆನ್ಸೀಸ್
Published 27 ಡಿಸೆಂಬರ್ 2018, 18:47 IST
Last Updated 27 ಡಿಸೆಂಬರ್ 2018, 18:47 IST
ಅಟ್ಲಾಂಟ ಎದುರಿನ ಪಂದ್ಯದಲ್ಲಿ ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಮಧ್ಯ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಅಟ್ಲಾಂಟ ಎದುರಿನ ಪಂದ್ಯದಲ್ಲಿ ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ (ಮಧ್ಯ) ಚೆಂಡನ್ನು ಗುರಿ ಮುಟ್ಟಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಮಿಲಾನ್‌: ಬದಲಿ ಆಟಗಾರನಾಗಿ ಅಂಗಳಕ್ಕಿಳಿದ ಕ್ರಿಸ್ಟಿಯಾನೊ ರೊನಾಲ್ಡೊ, ದ್ವಿತೀಯಾರ್ಧದಲ್ಲಿ ಗೋಲು ಗಳಿಸಿ ಯುವೆಂಟಸ್‌ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಅಟ್ಲೆಟಿ ಅಜುರಿ ಡಿಟಾಲಿಯಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಸೀರಿ ‘ಎ’ ಫುಟ್‌ಬಾಲ್‌ ಪಂದ್ಯದಲ್ಲಿ ಯುವೆಂಟಸ್‌ 2–2 ಗೋಲುಗಳಿಂದ ಅಟ್ಲಾಂಟ ತಂಡದ ಎದುರು ಡ್ರಾ ಮಾಡಿಕೊಂಡಿತು.

ಇದರೊಂದಿಗೆ ಯುವೆಂಟಸ್‌, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು. 18 ಪಂದ್ಯಗಳನ್ನು ಆಡಿರುವ ಈ ತಂಡ 16ರಲ್ಲಿ ಗೆದ್ದಿದ್ದು ಒಟ್ಟು 50 ಪಾಯಿಂಟ್ಸ್‌ ಕಲೆಹಾಕಿದೆ.

ADVERTISEMENT

ತವರಿನ ಅಭಿಮಾನಿಗಳ ಎದುರು ಆಡಿದ ಅಟ್ಲಾಂಟ ತಂಡಕ್ಕೆ ಆರಂಭದಲ್ಲೇ ಸಂಕಷ್ಟ ಎದುರಾಯಿತು.ಎರಡನೇ ನಿಮಿಷದಲ್ಲಿ ಈ ತಂಡದ ಬೆರಟ್‌ ಜಿಮಿಸಿಟ್‌ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಯುವೆಂಟಸ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು.

ನಂತರ ಅಟ್ಲಾಂಟ ತಂಡದ ಆಟ ರಂಗೇರಿತು. ಈ ತಂಡದ ದುವಾನ್‌ ಜಾಪಾಟ 24 ಮತ್ತು 56ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಆತಿಥೇಯರಿಗೆ 2–1ರ ಮುನ್ನಡೆ ತಂದುಕೊಟ್ಟರು. 53ನೇ ನಿಮಿಷದಲ್ಲಿ ಯುವೆಂಟಸ್‌ ತಂಡದ ರಾಡ್ರಿಗೊ ಬೆಂಟಾಕರ್‌ ಒರಟು ಆಟ ಆಡಿದರು. ಹೀಗಾಗಿ ರಾಡ್ರಿಗೊಗೆ ಪಂದ್ಯದ ರೆಫರಿ ‘ಕೆಂಪು ಕಾರ್ಡ್‌’ನ ದರ್ಶನ ಮಾಡಿ ಅಂಗಳದಿಂದ ಹೊರಗೆ ಕಳುಹಿಸಿದರು. ಆದ್ದರಿಂದ ಯುವೆಂಟಸ್‌ ತಂಡಕ್ಕೆ 10 ಮಂದಿಯೊಂದಿಗೆ ಆಡಬೇಕಾದ ಅನಿವಾರ್ಯತೆ ಎದುರಾಯಿತು.

70ನೇ ನಿಮಿಷದವರೆಗೂ ಅಟ್ಲಾಂಟ ತಂಡ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಅಂಗಳಕ್ಕಿಳಿದ ರೊನಾಲ್ಡೊ ಮೋಡಿ ಮಾಡಿದರು. ಅವರು 78ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ 2–2ರ ಸಮಬಲಕ್ಕೆ ಕಾರಣರಾದರು.

ಇತರ ಪಂದ್ಯಗಳಲ್ಲಿ ಪಾರ್ಮಾ 1–0ರಲ್ಲಿ ಫಿಯೊರೆಂಟಿನಾ ಎದುರೂ, ಕ್ಯಾಗ್ಲಿಯರಿ 1–0ರಲ್ಲಿ ಜಿನೊವಾ ಮೇಲೂ, ಟೋರಿನೊ 3–0ರಲ್ಲಿ ಎಂಪೊಲಿ ವಿರುದ್ಧವೂ, ರೋಮಾ 3–1ರಲ್ಲಿ ಸಸುವೊಲೊ ಎದುರೂ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.