ADVERTISEMENT

ಇಂಡಿಯನ್ ಸೂಪರ್ ಲೀಗ್: ಎಟಿಕೆಎಂಬಿ-ಮುಂಬೈ ಸಮಬಲದ ಹೋರಾಟ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪ್ರೀತಂ ನೀಡಿದ ‘ಉಡುಗೊರೆ’

ಪಿಟಿಐ
Published 3 ಫೆಬ್ರುವರಿ 2022, 19:36 IST
Last Updated 3 ಫೆಬ್ರುವರಿ 2022, 19:36 IST
ಎಟಿಕೆ ಎಂಬಿ ತಂಡದ ಡೇವಿಡ್ ವಿಲಿಯಮ್ಸ್ (ಬಲ) ಮತ್ತು ಹ್ಯೂಗೊ ಬೌಮೊಸ್ ಸಂಭ್ರಮಿಸಿದರು
ಎಟಿಕೆ ಎಂಬಿ ತಂಡದ ಡೇವಿಡ್ ವಿಲಿಯಮ್ಸ್ (ಬಲ) ಮತ್ತು ಹ್ಯೂಗೊ ಬೌಮೊಸ್ ಸಂಭ್ರಮಿಸಿದರು   

ಫತೋರ್ಡ (ಪಿಟಿಐ): ಉಡುಗೊರೆ ಗೋಲು ನೀಡಿದ ಎಟಿಕೆ ಮೋಹನ ಬಾಗನ್ (ಎಟಿಕೆಎಂಬಿ) ತಂಡ ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾಯಿತು. ಗುರುವಾರ ರಾತ್ರಿ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯ 1–1ರಲ್ಲಿ ಸಮ ಆಯಿತು.

ಒಂಬತ್ತನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಗಳಿಸಿದ ಗೋಲಿನೊಂದಿಗೆ ಎಟಿಕೆಎಂಬಿ ಮುನ್ನಡೆ ಗಳಿಸಿತ್ತು. ತಿರುಗೇಟು ನೀಡಲು ಪ್ರಯತ್ನಿಸಿದ ಮುಂಬೈ ಸಿಟಿ ಎಫ್‌ಸಿಗೆ ಪ್ರೀತಂ ಗೋಲಿನ ಉಡುಗೊರೆ ನೀಡಿದರು. ಹೀಗಾಗಿ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಬ್ಲಾಸ್ಟರ್ಸ್‌ಗೆ ಲಯಕ್ಕೆ ಮರಳುವ ತವಕ

ADVERTISEMENT

ವಾಸ್ಕೊದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಲಿವೆ. 10 ಪಂದ್ಯಗಳಲ್ಲಿ ಅಜೇಯ ಓಟ ಓಡಿದ್ದ ಕೇರಳ ಬ್ಲಾಸ್ಟರ್ಸ್‌ ಕಳೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ 1–0ಯಿಂದ ಸೋತಿತ್ತು. ಹೀಗಾಗಿ ಮತ್ತೆ ಜಯದ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಟೂರ್ನಿಯಲ್ಲಿ ಇದು ಬ್ಲಾಸ್ಟರ್ಸ್ ತಂಡದ ಎರಡನೇ ಸೋಲಾಗಿತ್ತು. ಒಟ್ಟು 12 ಪಂದ್ಯಗಳನ್ನು ಆಡಿರುವ ತಂಡ ಐದರಲ್ಲಿ ಗೆದ್ದಿದ್ದು ಐದನ್ನು ಡ್ರಾ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ಎದುರು ಜಯ ಸಾಧಿಸುವ ಭರವಸೆಯಲ್ಲಿದೆ.

ರಕ್ಷಣಾ ವಿಭಾಗದಲ್ಲಿ ಕೇರಳ ಬ್ಲಾಸ್ಟರ್ಸ್ ಬಲಿಷ್ಠವಾಗಿದೆ. ಸೋಲಿಗೆ ಶರಣಾಗದ 10 ಪಂದ್ಯಗಳ ಪೈಕಿ ಐದರಲ್ಲಿ ಕೇರಳ ಕ್ಲೀನ್ ಶೀಟ್ ಸಾಧನೆ ಮಾಡಿದೆ. ಉಳಿದ ಐದು ಪಂದ್ಯಗಳಲ್ಲಿ ಆರು ಗೋಲು ಮಾತ್ರ ಬಿಟ್ಟುಕೊಟ್ಟಿದೆ. ಸತತ 10 ಪಂದ್ಯಗಳ ಅಜೇಯ ಓಟದ ಸಂದರ್ಭದಲ್ಲಿ ತಂಡ ಒಂದು ಪಂದ್ಯದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಗೋಲು ಬಿಟ್ಟುಕೊಟ್ಟಿದೆ.

ನೀರಸ ಆಟವಾಡಿರುವ ನಾರ್ತ್ ಈಸ್ಟ್ ಯುನೈಟೆಡ್ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ 0–5ರಲ್ಲಿ ಸೋತಿತ್ತು. ದೇಶಾನ್ ಬ್ರೌನ್‌ ಲಭ್ಯ ಇಲ್ಲದೇ ಇರುವುದು ತಂಡವನ್ನು ಕಾಡುತ್ತಿದೆ. ಶುಕ್ರವಾರದ ಪಂದ್ಯಕ್ಕೆ ಅವರು ಲಭ್ಯ ಇರುತ್ತಾರೆ ಎಂದು ಕೋಚ್‌ ಖಲೀದ್ ಜಮೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.