ADVERTISEMENT

ಖಾಲಿದ್‌ ಜಮೀಲ್‌ಗೆ ಪೂರ್ಣ ಸ್ವಾತಂತ್ರ್ಯ: ಕಲ್ಯಾಣ್‌ ಚೌಬೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 16:13 IST
Last Updated 25 ಆಗಸ್ಟ್ 2025, 16:13 IST
ಪತ್ರಿಕಾಗೋಷ್ಠಿಯಲ್ಲಿ ಎಐಎಫ್‌ಎಫ್‌ ಉಪಾಧ್ಯಕ್ಷ, ಕೆಎಸ್‌ಎಫ್‌ಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಭಾರತ ಪುರುಷರ ಫುಟ್‌ಬಾಲ್‌ ತಂಡದ ಕೋಚ್‌ ಖಾಲಿದ್‌ ಜಮೀಲ್‌, ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.
ಪತ್ರಿಕಾಗೋಷ್ಠಿಯಲ್ಲಿ ಎಐಎಫ್‌ಎಫ್‌ ಉಪಾಧ್ಯಕ್ಷ, ಕೆಎಸ್‌ಎಫ್‌ಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಭಾರತ ಪುರುಷರ ಫುಟ್‌ಬಾಲ್‌ ತಂಡದ ಕೋಚ್‌ ಖಾಲಿದ್‌ ಜಮೀಲ್‌, ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.   

ಬೆಂಗಳೂರು: ‘ಖಾಲಿದ್‌ ಜಮೀಲ್‌ ಅವರು ಭಾರತ ಸೀನಿಯರ್ ಫುಟ್‌ಬಾಲ್‌ ತಂಡದ ಕೋಚ್‌ ಹುದ್ದೆಗೇರಿದ ಬಳಿಕ ಆಟಗಾರರಲ್ಲಿ ಹೊಸ ಚೈತನ್ಯ, ಬದಲಾವಣೆಯನ್ನು ಕಂಡಿದ್ದೇವೆ. ತಂಡದ ಆಯ್ಕೆಯಲ್ಲಿ ಜಮೀಲ್‌ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು, ಮುಂದಿನ ಟೂರ್ನಿಗಳಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಅಧ್ಯಕ್ಷ ಕಲ್ಯಾಣ್‌ ಚೌಬೆ ವಿಶ್ವಾಸ ವ್ಯಕ್ತಪಡಿಸಿದರು.

‘ಹಲವು ಕ್ಲಬ್‌ಗಳಲ್ಲಿ ಕೆಲಸ ಮಾಡಿರುವ ಜಮೀಲ್‌ ಅವರು ತಂಡದ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ತಂಡವನ್ನು ಫಿಫಾ ಟೂರ್ನಿಗೆ ಕೊಂಡೊಯ್ಯುವುದು ನಮ್ಮ ಮುಂದಿರುವ ದೊಡ್ಡ ಗುರಿಯಾಗಿದೆ. ಈ ನಿಟ್ಟಿನಲ್ಲಿ ಜಮೀಲ್‌ ಅವರಿಗೆ ಎಐಎಫ್‌ಎಫ್‌ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಜಮೀಲ್‌ ಮೂಲಕ ಸೀನಿಯರ್‌ ತಂಡಕ್ಕೆ ಎರಡು ದಶಕಗಳ ಬಳಿಕ ದೇಶೀಯ ಕೋಚ್ ಲಭಿಸಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಅನಿಶ್ಚಿತತೆಯಿಂದ ಕ್ಲಬ್‌ಗಳ ಆಟಗಾರರು ಮತ್ತು ಸಿಬ್ಬಂದಿಯ ಜೀವನೋಪಾಯವು ಅಪಾಯದಲ್ಲಿದೆ. ಮಾಸ್ಟರ್ಸ್ ರೈಟ್ ಒಪ್ಪಂದ (ಎಂಆರ್‌ಎ) ಕುರಿತು ಚರ್ಚಿಸಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ ನಂತರ ಐಎಸ್‌ಎಲ್ ಪಾಲುದಾರರೊಂದಿಗೆ ಮಾತುಕತೆ ನಡೆಯುತ್ತಿದೆ. ಎಲ್ಲರ ಸಹಕಾರದಿಂದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ’ ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ನಿರಾಸೆಯಾಗಿದೆ: ‘ಕಂಠೀರವ ಕ್ರೀಡಾಂಗಣವು ಎಲ್ಲಾ ಕ್ರೀಡೆಗೆ ಇರುವ ತಾಣವಾಗಿದೆ. ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಕ್ಕೆ ಅದರದ್ದೇ ಆದ ಮಾನದಂಡಗಳು ಇವೆ. ಹೀಗಾಗಿ, ಅ.14ರಂದು ನಡೆಯಲಿರುವ ಭಾರತ– ಸಿಂಗಪುರ ನಡುವಿನ ಎಎಫ್‌ಸಿ ಏಷ್ಯನ್‌ ಕಪ್‌ ಕ್ವಾಲಿಫೈಯರ್‌ ಪಂದ್ಯವನ್ನು ಇಲ್ಲಿ ನಡೆಸಲು ಏಷ್ಯನ್‌ ಫುಟ್‌ಬಾಲ್‌ ಒಕ್ಕೂಟ (ಎಎಫ್‌ಸಿ) ಅವಕಾಶ ನಿರಾಕರಿಸಿದೆ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಈ ಪಂದ್ಯದ ಆತಿಥ್ಯ ಬೆಂಗಳೂರಿಗೆ ಕೈತಪ್ಪಿರುವುದು ನಿರಾಸೆಯಾಗಿದೆ’ ಎಂದು ಎಐಎಫ್‌ಎಫ್‌ ಉಪಾಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಹೇಳಿದರು.

‘ಬೆಂಗಳೂರಿನಲ್ಲಿ ಸುಸಜ್ಜಿತವಾದ ಫುಟ್‌ಬಾಲ್‌ ಕ್ರೀಡಾಂಗಣವನ್ನು ನಿರ್ಮಿಸುವ ಪ್ರಯತ್ನ ಕೆಎಸ್‌ಎಫ್‌ಎಯಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕೆಲಸಗಳು ನಡೆಯುತ್ತಿವೆ’ ಎಂದು ಶಾಂತಿನಗರ ಶಾಸಕರೂ ಆಗಿರುವ ಹ್ಯಾರಿಸ್‌ ಭರವಸೆ ನೀಡಿದರು.

ನೇಷನ್ಸ್‌ ಕಪ್‌: ತಂಡ ಪ್ರಕಟಿಸಿದ ಜಮೀಲ್‌

ತಜಕಿಸ್ಥಾನದಲ್ಲಿ ಇದೇ 29ರಂದು ಆರಂಭವಾಗುವ ಸಿಎಎಫ್‌ಎ ನೇಷನ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ 23 ಸದಸ್ಯರ ಭಾರತ ಸೀನಿಯರ್‌ ಪುರುಷರ ತಂಡವನ್ನು ಕೋಚ್‌ ಖಾಲಿದ್‌ ಜಮೀಲ್‌ ಸೋಮವಾರ ಪ್ರಕಟಿಸಿದರು. 

ಇಲ್ಲಿನ ಡ್ರಾವಿಡ್‌– ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆಗಸ್ಟ್‌ 15ರಿಂದ ಸಂಭಾವ್ಯ 35 ಆಟಗಾರರಿಗೆ ತರಬೇತಿ ಶಿಬಿರ ನೀಡಿದ ಅವರು ತಂಡವನ್ನು ಅಂತಿಮಗೊಳಿಸಿದ್ದಾರೆ. ತರಬೇತುದಾರನಾಗಿ ಅವರ ಪಾಲಿಗೆ ಈ ಟೂರ್ನಿಯು ಮೊದಲ ಸವಾಲಾಗಿದೆ. ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ.1) ಮತ್ತು ಅಫ್ಗಾನಿಸ್ತಾನ (ಸೆ.4) ತಂಡಗಳನ್ನು ಎದುರಿಸಲಿದೆ. ‌

ಮೋಹನ್‌ ಬಾಗನ್‌ ತಂಡವು ತನ್ನ ಆಟಗಾರರನ್ನು ರಾಷ್ಟ್ರೀಯ ತರಬೇತಿಗೆ ಬಿಡುಗಡೆ ಮಾಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಜಮೀಲ್‌, ‘ದೇಶದಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆಯಿಲ್ಲ. ಅವರ ಸಾಮರ್ಥ್ಯವನ್ನು ಸೂಕ್ತ ಸಂದರ್ಭದಲ್ಲಿ ಬಳಸಿಕೊಳ್ಳುವುದು ಮುಖ್ಯ. ಲಭ್ಯ ಆಟಗಾರರನ್ನು ಬಳಸಿಕೊಂಡು ನೇಷನ್ಸ್‌ ಕಪ್‌ ಟೂರ್ನಿಗೆ ಸಮತೋಲನದ ಮತ್ತು ಬಲಿಷ್ಠ ತಂಡವನ್ನು ಕಟ್ಟಲಾಗಿದೆ. ಅನುಭವಿ ಸುನಿಲ್‌ ಚೆಟ್ರಿ ಅವರು ಫಿಟ್‌ ಆಗಿದ್ದರೆ ಅವರಿಗೆ ಯಾವಾಗಲೂ ಸ್ವಾಗತವಿದೆ’ ಎಂದು ಜಮೀಲ್‌ ಹೇಳಿದರು.

ಭಾರತ ತಂಡ ಹೀಗಿದೆ: ಗೋಲ್‌ಕೀಪರ್ಸ್‌: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಹೃತಿಕ್ ತಿವಾರಿ. ಡಿಫೆಂಡರ್ಸ್‌: ರಾಹುಲ್ ಭೇಕೆ, ನವೋರೆಮ್ ರೋಷನ್ ಸಿಂಗ್, ಅನ್ವರ್ ಅಲಿ, ಸಂದೇಶ್ ಜಿಂಗನ್, ಚಿಂಗ್ಲೆನ್ ಸನಾ ಸಿಂಗ್, ಲಲೆಂಗ್ಮಾವಿಯಾ ರಾಲ್ಟೆ, ಮೊಹಮ್ಮದ್ ಉವೈಸ್. ಮಿಡ್‌ಫೀಲ್ಡರ್ಸ್‌: ನಿಖಿಲ್ ಪ್ರಭು, ಸುರೇಶ್ ಸಿಂಗ್ ವಾಂಗ್‌ಜಮ್, ಡ್ಯಾನಿಶ್ ಫಾರೂಕ್ ಭಟ್, ಜೀಕ್ಸನ್ ಸಿಂಗ್, ಬೋರಿಸ್ ಸಿಂಗ್, ಆಶಿಕ್ ಕುರುನಿಯನ್, ಉದಾಂತ ಸಿಂಗ್, ನವೋರೆಮ್ ಮಹೇಶ್ ಸಿಂಗ್. ಫಾರ್ವರ್ಡ್ಸ್‌: ಇರ್ಫಾನ್ ಯಾದವಾಡ, ಮನ್ವೀರ್ ಸಿಂಗ್, ಜಿತಿನ್ ಎಂ.ಎಸ್, ಲಾಲಿಯನ್ಜುವಾಲಾ ಚಾಂಗ್ಟೆ, ವಿಕ್ರಮ್ ಪ್ರತಾಪ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.