
ಅರುಮೈನಾಯಗಂ ಅವರಿಗೆ ಕೆಎಸ್‌ಎಫ್‌ಎ 2024–25ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ಅರುಮೈನಾಯಗಂ ಅವರು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆೆಎಸ್‌ಎಫ್‌ಎ) ಕೊಡಮಾಡುವ 2024–25ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದರು.
ಅರುಮೈನಾಯಗಂ ಅವರು 1961 ರಿಂದ 68ರ ವರೆಗೆ ಮೋಹನ್ ಬಾಗನ್ ಕ್ಲಬ್ ಪರ ಆಡಿದ್ದರು. 1977ರ ಅವಧಿಯಲ್ಲಿ ಅವರು ಚೆನ್ನೈನಲ್ಲಿ ಸದರ್ನ್ ರೈಲ್ವೇಸ್ ಪರ ಆಡಿದ್ದರು. ಅವರು ಏಷ್ಯನ್ ಚಿನ್ನದ ಪದಕವನ್ನು ಜಯಿಸಿದ್ದರು.
ನಗರದ ಆಸ್ಟಿನ್‌ಟೌನ್‌ನಲ್ಲಿರುವ ನಂದನ್ ಫುಟ್‌ಬಾಲ್ ಮೈದಾನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ, ಉಪಾಧ್ಯಕ್ಷ ಎನ್.ಎ.ಹ್ಯಾರಿಸ್, ಉಪಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ್ ಎಂ., ಫುಟ್‌ಬಾಲ್ ದಿಗ್ಗಜ ಸುನಿಲ್ ಚೆಟ್ರಿ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಎಫ್‌ಸಿ ಅಗ್ನಿಪುತ್ರ ತಂಡದ ಕಾರ್ತಿಕ್ ಗೋವಿಂದಸ್ವಾಮಿ ಹಾಗೂ ಬೆಂಗಳೂರು ಎಫ್‌ಸಿ ತಂಡದ ತನ್ವಿ ನಾಯರ್ ಅವರು ಕ್ರಮವಾಗಿ ವರ್ಷದ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಮೃತ್ಯುಂಜಯ್ ಎಲ್.ಎ. ಅವರಿಗೆ ವರ್ಷದ ರೆಫ್ರಿ ಪ್ರಶಸ್ತಿ ಪಧಾನ ಮಾಡಲಾಯಿತು.
ಕರ್ನಾಟಕ ಫುಟ್‌ಬಾಲ್‌ಗೆ ನೀಡಿರುವ ಕೊಡುಗೆಗಾಗಿ ಚಿಕ್ಕಚೆನ್ನಯ್ಯ ಹಾಗೂ ಬಿ.ವೆಂಕಟ ಅವರನ್ನು ಗೌರವಿಸಲಾಯಿತು.