ADVERTISEMENT

ಅಭಿಮಾನಿಗಳನ್ನೇ ತರಾಟೆಗೆ ತೆಗೆದುಕೊಂಡ ಲಿವರ್‌ಪೂಲ್ ಕ್ಲಬ್

ಏಜೆನ್ಸೀಸ್
Published 27 ಜೂನ್ 2020, 13:59 IST
Last Updated 27 ಜೂನ್ 2020, 13:59 IST
ಲಿವರ್‌ಪೂಲ್‌ ತಂಡದ ಅಭಿಮಾನಿಗಳು ಸಂಭ್ರಿಮಿಸಿದ ಪರಿ –ರಾಯಿಟರ್ಸ್‌ ಚಿತ್ರ
ಲಿವರ್‌ಪೂಲ್‌ ತಂಡದ ಅಭಿಮಾನಿಗಳು ಸಂಭ್ರಿಮಿಸಿದ ಪರಿ –ರಾಯಿಟರ್ಸ್‌ ಚಿತ್ರ   

ಲಂಡನ್: ಅಂತರ ಕಾಯ್ದುಕೊಳ್ಳದೆ ಸಂಭ್ರಮಾಚರಣೆ ಮಾಡಿದ ತನ್ನದೇ ಅಭಿಮಾನಿಗಳನ್ನು ಲಿವರ್‌ಪೂಲ್ ಕ್ಲಬ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೂರು ದಶಕಗಳಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿಯನ್ನು ಗುರುವಾರ ಲಿವರ್‌ಪೂಲ್ ಮುಡಿಗೇರಿಸಿಕೊಂಡಿತ್ತು.

ಕೊರೊನಾ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಅಕ್ಷಮ್ಯ ಎಂದು ಮೆರ್ಸಿಸೈಡ್ ಪೊಲೀಸ್ ಮತ್ತು ಲಿವರ್‌ಪೂಲ್ ಸಿಟಿ ಕೌನ್ಸಿಲ್ ಜೊತೆ ಹೊರಡಿಸಿರುವ ಪ್ರಕಟಣೆಯಲ್ಲಿ ಕ್ಲಬ್ ಹೇಳಿದೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್‌ ಸಿಟಿ ತಂಡವು 1–2 ಗೋಲುಗಳಿಂದ ಚೆಲ್ಸಿ ಎದುರು ಸೋತಿತು. ಹೀಗಾಗಿ ಲಿವರ್‌ಪೂಲ್‌ ತಂಡದ ಪ್ರಶಸ್ತಿಯ ಕನಸು ಸಾಕಾರಗೊಂಡಿತು. ಟೂರ್ನಿಯ ಪಂದ್ಯಗಳು ಮುಂದುವರಿದಿವೆ. ಆದರೆ ಲಿವರ್‌ಪೂಲ್ 31 ಪಂದ್ಯಗಳಿಂದ 86 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ. ಮ್ಯಾಂಚೆಸ್ಟರ್ ಸಿಟಿ ತಂಡ ಅಷ್ಟೇ ಪಂದ್ಯಗಳಿಂದ 63 ಪಾಯಿಂಟ್ ಕಲೆ ಹಾಕಿ ದ್ವಿತೀಯ ಸ್ಥಾನದಲ್ಲಿದೆ.ಉಳಿದ ಏಳು ಪಂದ್ಯಗಳನ್ನು ಗೆದ್ದರೂ ಮ್ಯಾಂಚೆಸ್ಟರ್‌ಗೆ ಲಿವರ್‌ಪೂಲ್‌ ತಂಡವನ್ನು ಹಿಂದಿಕ್ಕಲು ಆಗುವುದಿಲ್ಲ.

ADVERTISEMENT

ಮ್ಯಾಂಚೆಸ್ಟರ್‌ ಸಿಟಿ ಮತ್ತು ಚೆಲ್ಸಿ ನಡುವಿನ ಪಂದ್ಯ ಮುಗಿದ ಕೂಡಲೇ ಆ್ಯನ್‌ಫೀಲ್ಡ್‌ ನಗರದಲ್ಲಿ ಸಂಭ್ರಮಮೇಳೈಸಿತ್ತು. ಕ್ರೀಡಾಂಗಣದ ಹೊರಗೆ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಟ್ರೋಫಿಯ ಪ್ರತಿಕೃತಿ ಹಿಡಿದು ಕೇಕೆ ಕಾಕಿದರು. ಪಟಾಕಿ ಬೆಳಕು ಮೂಡಿತು. ಘೋಷಣೆಯ ಸದ್ದು ಕೇಳಿ ಬಂತು. ಶುಕ್ರವಾರ ಮುಂಜಾನೆಯೂ ಖುಷಿಯ ಅಲೆಗಳು ಎದ್ದಿದ್ದವು.

ಅಭಿಮಾನಿಗಳ ನಡೆಗೆ ಬೇಸರಪಟ್ಟಿರುವ ಕ್ಲಬ್ ‘ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿ ನಗರವು ಇನ್ನೂ ಸೂಕ್ಷ್ಮ ಪ್ರದೇಶವಾಗಿದ್ದು ಕೊರೊನಾವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಹೋರಾಡಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮೇರೆ ಮೀರಿ ವರ್ತಿಸಿದ್ದು ಸರಿಯೇ ಅಲ್ಲ’ ಎಂದು ಹೇಳಿದೆ.

ಲಿವರ್‌ಪೂಲ್ ಮೇಯರ್ ಜೋ ಆ್ಯಂಡೆರ್ಸನ್ ಕೂಡ ಫುಟ್‌ಬಾಲ್ ಪ್ರೇಮಿಗಳನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಅವರ ವರ್ತನೆಯು ನಗರದ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಕ್ರೀಡಾಪಟುಗಳಿಂದ ಅಭಿನಂದನೆ

ಲಿವರ್‌ಪೂಲ್ ತಂಡವನ್ನು ಪ್ರಮುಖ ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರು ಅಭಿನಂದಿಸಿದ್ದಾರೆ. ಬ್ಯಾಸ್ಕೆಟ್‌ಬಾಲ್‌ ಪಟು ಲೆಬ್ರಾನ್‌ ಜೇಮ್ಸ್‌, ಚಲನಚಿತ್ರ ನಟ ಸ್ಯಾಮುಯೆಲ್‌ ಎಲ್‌.ಜಾಕ್ಸನ್‌ ಮತ್ತು ಟೆನಿಸ್‌ ಆಟಗಾರ್ತಿ ಕ್ಯಾರೊಲಿನಾ ವೋಜ್ನಿಯಾಕಿ ಮತ್ತಿತರರು ಸಾಧನೆಯನ್ನು ಕೊಂಡಾಡಿದ್ದಾರೆ.

‘ಇದು ಅಮೋಘ ಸಾಧನೆ. ಈ ಖುಷಿಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ’ ಎಂದು ಲಿವರ್‌ಪೂಲ್‌ ತಂಡದ ಕೋಚ್‌ ಜುರ್ಗೆನ್‌ ಕ್ಲಾಪ್‌ ಹೇಳಿದ್ದಾರೆ.

‘ಕ್ಲಾಪ್‌ ಮೇಲೆ ನಮಗೆ ಅಪಾರ ನಂಬಿಕೆ ಇದೆ. ಹೀಗಾಗಿ ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಇದು ಬಹುದೊಡ್ಡ ಸಾಧನೆ. ಹಾಗಂತ ಖುಷಿಯಲ್ಲಿ ಮೈ ಮರೆಯುವುದಿಲ್ಲ. ಮುಂದೆ ಇನ್ನಷ್ಟು ಟ್ರೋಫಿಗಳನ್ನು ಜಯಿಸಲು ಪ್ರಯತ್ನಿಸುತ್ತೇವೆ’ ಎಂದು ನಾಯಕ ಜೋರ್ಡನ್‌ ಹೆಂಡರ್ಸನ್‌ ನುಡಿದಿದ್ದಾರೆ. 2017–18ನೇ ಸಾಲಿನ ಟೂರ್ನಿಯಲ್ಲಿ ಮ್ಯಾಂಚೆಸ್ಟರ್‌ ಸಿಟಿ ತಂಡ 100 ಪಾಯಿಂಟ್ಸ್‌ ಗಳಿಸಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಅಳಿಸುವ ಅವಕಾಶ ಲಿವರ್‌ಪೂಲ್‌ ತಂಡಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.