ನವದೆಹಲಿ: ಆಸ್ಟ್ರೇಲಿಯಾದ ಫಾರ್ವರ್ಡ್ ಜೇಸನ್ ಕಮಿಂಗ್ಸ್ ಅವರ ವರ್ಗಾವಣೆಗೆ ಸಂಬಂಧಿಸಿ ಆದ ‘ತಾಂತ್ರಿಕ ದೋಷ’ದ ಕಾರಣ ಹೊಸ ಆಟಗಾರರ ನೋಂದಣಿ ಮಾಡದಂತೆ ಐಎಸ್‌ಎಲ್ ವಿಜೇತ ತಂಡ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ಮೇಲೆ ರಾಷ್ಟ್ರೀಯ ನಿಷೇಧ ಹೇರಲಾಗಿದೆ.
ಫಿಫಾದ ನ್ಯಾಯಿಕ ಮಂಡಳಿಯ ನಿರ್ದೇಶಕರಿಂದ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್) ಈ ಸಂಬಂಧ ಅಧಿಕೃತ ಸಂದೇಶ ಬಂದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ಫಿಫಾದ ಸೂಚನೆಯಂತೆ ತಕ್ಷಣ ಜಾರಿಗೆ ಬರುವಂತೆ ಹೊಸ ಆಟಗಾರರನ್ನು ನೋಂದಾಯಿಸುವುದರ ಮೇಲೆ ರಾಷ್ಟ್ರೀಯ ಮಟ್ಟದ ನಿಷೇಧ ಜಾರಿಗೊಳಿಸಲಾಗಿದೆ ಎಂದು ಎಐಎಫ್‌ಎಫ್, ಮೋಹನ್ ಬಾಗನ್‌ಗೆ ತಿಳಿಸಿದೆ.
‘ಇದು ಸಣ್ಣ ವಿಷಯ. ಇದನ್ನು ಮೋಹನ್ ಬಾಗನ್ ಸೂಪರ್‌ಜೈಂಟ್ಸ್ ವಾರದ ಒಳಗೆ ಬಗೆಹರಿಸಲಿದೆ’ ಎಂದು ಕ್ಲಬ್‌ನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
‘ಇದು ತಾತ್ಕಾಲಿಕ ನಿಷೇಧ. ಆದರೆ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ಆಡಳಿತ ಮಂಡಳಿಯು ಇದನ್ನು ಪರಿಹರಿಸಲು ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಕೆಲವೇ ದಿನಗಳಲ್ಲಿ ನಿಷೇಧ ತೆರವಾಗಲಿದೆ’ ಎಂದು ಅಧಿಕಾರಿ ತಿಳಿಸಿದರು.
‘ಇದು ಹಣಕಾಸು ಅಕ್ರಮಕ್ಕೆ ಸಂಬಂಧಿಸಿದ್ದಲ್ಲ. ಆಡಳಿತಾತ್ಮಕ ಸ್ವರೂಪದ್ದು. ಫಿಫಾ ಜೊತೆ ಸಂಪರ್ಕ ಸಾಧಿಸಲಾಗಿದೆ. ವಾರದ ಒಳಗೆ ಸರಿಪಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.