ADVERTISEMENT

ಪೆನಾಲ್ಟಿ ‘ಡಬಲ್’ ಮೂಲಕ ಮಿಂಚಿದ ರೊನಾಲ್ಡೊ; ಯುವೆಂಟಸ್ ನಿಟ್ಟುಸಿರು

ಏಜೆನ್ಸೀಸ್
Published 12 ಜುಲೈ 2020, 8:19 IST
Last Updated 12 ಜುಲೈ 2020, 8:19 IST
ಚೆಂಡನ್ನು ಗುರಿಯತ್ತ ಒದ್ದ ಕ್ರಿಸ್ಟಿಯಾನೊ ರೊನಾಲ್ಡೊ –ರಾಯಿಟರ್ಸ್ ಚಿತ್ರ
ಚೆಂಡನ್ನು ಗುರಿಯತ್ತ ಒದ್ದ ಕ್ರಿಸ್ಟಿಯಾನೊ ರೊನಾಲ್ಡೊ –ರಾಯಿಟರ್ಸ್ ಚಿತ್ರ   

ಮಿಲನ್: ಎರಡು ಪೆನಾಲ್ಟಿ ಅವಕಾಶಗಳಲ್ಲಿ ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಶನಿವಾರ ರಾತ್ರಿ ನಡೆದ ಸೀರಿ ಎ ಫುಟ್‌ಬಾಲ್ ಟೂರ್ನಿಯ ಪಂದ್ಯಕ್ಕೆ ನಾಟಕೀಯ ತಿರುವು ನೀಡಿದರು. ಅಟ್ಲಾಂಟ ಎದುರಿನ ಪಂದ್ಯದಲ್ಲಿ ರೊನಾಲ್ಡೊ ಅವರ ಕಾಲ್ಚಳಕದ ಬಲದಿಂದ ಯುವೆಂಟಸ್ 2–2 ಗೋಲುಗಳ ಡ್ರಾ ಸಾಧಿಸಿತು. ಈ ಮೂಲಕ ಸತತ ಒಂಬತ್ತನೇ ಪ್ರಶಸ್ತಿ ಎತ್ತಿಹಿಡಿಯುವತ್ತ ಹೆಜ್ಜೆ ಹಾಕಿತು.

ಪಂದ್ಯದ ಆರಂಭದಲ್ಲಿ ಯುವೆಂಟಸ್ ಮೇಲುಗೈ ಸಾಧಿಸಿತ್ತು. ಆದರೂ ಅದನ್ನು ಹೆಚ್ಚು ಸಮಯ ಉಳಿಸಿಕೊಳ್ಳಲು ಎದುರಾಳಿಗಳು ಬಿಡಲಿಲ್ಲ. ಗೋಲು ಗಳಿಸುವ ಮೊದಲ ಅವಕಾಶ ಯುವೆಂಟಸ್‌ಗೆ ಲಭಿಸಿತ್ತು. ಆದರೆ ಜೊಸಿಪ್ ಐಸಿಲಿಕ್ ಒದ್ದ ಚೆಂಡು ಗೋಲುಪೆಟ್ಟಿಗೆಯ ಹೊರಗೆ ಚಿಮ್ಮಿತು. ಅಟ್ಲಾಂಟ ತಂಡ ಲಭಿಸಿದ ಅವಕಾಶವನ್ನು ಕೈಚೆಲ್ಲಲಿಲ್ಲ. 16ನೇ ನಿಮಿಷದಲ್ಲಿ ತಂಡಕ್ಕೆ ಡುವಾನ್ ಜಪಾಟ ಗೋಲು ತಂದುಕೊಟ್ಟರು.

ಮಿಡ್‌ಫೀಲ್ಡ್‌ನಲ್ಲಿದ್ದ ಪಪು ಗೊಮೆಜ್, ಎದುರಾಳಿ ಆಟಗಾರರ ಎಡೆಯಿಂದ ಚೆಂಡನ್ನು ಜಪಾಟಗೆ ತಲುಪಿಸಿದರು. ಅವರು ಮೋಹಕವಾಗಿ ಗೋಲು ಗಳಿಸಿದರು. ಲೀಗ್‌ನಲ್ಲಿ ಇದು ಅವರ 15ನೇ ಗೋಲು. ಈ ಮೂಲಕ ಸೀರಿ ಎ ಲೀಗ್‌ನ ಒಂದೇ ಋತುವಿನಲ್ಲಿ ಮೂವರು ಆಟಗಾರರು 15 ಗೋಲುಗಳನ್ನು ಗಳಿಸಿದ ವಿಶಿಷ್ಟ ಮೈಲುಗಲ್ಲು ಇಲ್ಲಿ ಸ್ಥಾಪನೆಯಾಯಿತು.

ADVERTISEMENT

ಅಟ್ಲಾಂಟಕ್ಕೆ ತಿರುಗೇಟು ನೀಡಲು ಪೌಲೊ ದೈಬಾಲಗೆ ಉತ್ತಮ ಅವಕಾಶ ಒದಗಿತ್ತು. ಆದರೆ ಅವರು ಗಾಳಿಯಲ್ಲಿ ತೇಲಿಬಿಟ್ಟ ಚೆಂಡು ಹೊರಗೆ ಹೋಯಿತು.

ದ್ವಿತೀಯಾರ್ಧದ 10ನೇ ನಿಮಿಷದಲ್ಲಿ ಯುವೆಂಟಸ್‌ಗೆ ಪೆನಾಲ್ಟಿ ಅವಕಾಶ ಒದಗಿ ಬಂತು. ದೈಬಾಲ್ ಕ್ರಾಸ್ ಮಾಡಿದ ಚೆಂಡನ್ನು ಕೈಯಲ್ಲಿ ತಡೆದ ಮಾರ್ಟೆನ್ ಡಿ ರಾನ್ ಅಟ್ಲಾಂಟ ತಂಡಕ್ಕೆ ಸಂಕಟ ತಂದಿತ್ತರು. ವಾಯುವೇಗದಲ್ಲಿ ಚೆಂಡನ್ನು ಬಲೆಯೊಳಗೆ ಸೇರಿಸಿದ ರೊನಾಲ್ಡೊ ಸೀರಿ ಎ ಲೀಗ್‌ನ ವೈಯಕ್ತಿಕ 27ನೇ ಗೋಲಿನೊಂದಿಗೆ ಮಿಂಚಿದರು.

ಪ್ರಶಸ್ತಿಯ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಅಟ್ಲಾಂಟಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿತ್ತು. ಹೀಗಾಗಿ ಮತ್ತಷ್ಟು ಆಕ್ರಮಣಕ್ಕೆ ಒತ್ತು ನೀಡಿತು. ಇದಕ್ಕೆ 80ನೇ ನಿಮಿಷದಲ್ಲಿ ಫಲ ಸಿಕ್ಕಿತು. ರೂಸಿಯನ್ ಮಲಿನೊವ್‌ಸ್ಕಿ ಗೋಲು ಗಳಿಸಿದರು.

ಪಂದ್ಯದ ಮುಕ್ತಾಯಕ್ಕೆ 10 ನಿಮಿಷ ಇದ್ದಾಗ ರೊನಾಲ್ಡೊಗೆ ಗೋಲು ಗಲಿಸುವ ಅವಕಾಶ ಒದಗಿತ್ತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ಪೆರ್ಲುಗಿ ಗೊಲಿನಿ ರೋಚಕವಾಗಿ ಚೆಂಡನ್ನು ತಡೆದು ಮಿಂಚಿದರು. ಆದರೆ ಸ್ವಲ್ಪ ಸಮಯದಲ್ಲೇ ಅಟ್ಲಾಂಟ ಮತ್ತೊಮ್ಮೆ ತಪ್ಪು ಎಸಗಿ ರೊನಾಲ್ಡೊಗೆ ಸುವರ್ಣಾವಕಾಶ ಒದಗಿಸಿಕೊಟ್ಟಿತು. ಚೆಂಡನ್ನು ಕೈಯಲ್ಲಿ ಸ್ಪರ್ಶಿಸಿ ಮುರೀಲ್ ಪೆನಾಲ್ಟಿಗೆ ಅವಕಾಶ ನೀಡಿದರು. ಇದನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸಿದರು.

ಲಾಸಿಯೊ ತಂಡಕ್ಕೆ ನಿರಾಸೆ

ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಲಾಸಿಯೊ ತಂಡದ ಪ್ರಶಸ್ತಿ ಕನಸು ನುಚ್ಚುನೂರಾಯಿತು. ಸಸುವೊಲೊ ತಂಡದ ಎದುರಿನ ಪಂದ್ಯದ ನಿಗದಿತ ಅವಧಿ ವರೆಗೆ 1–1ರ ಸಮಬಲ ಸಾಧಿಸಿದ್ದ ತಂಡಕ್ಕೆ ಇಂಜುರಿ ಸಮಯದಲ್ಲಿ ಫ್ರಾನ್ಸಿಸ್ಕೊ ಕಪುಟೊ ಪೆಟ್ಟು ನೀಡಿದರು. ಸ್ಟೇಡಿಯೊ ಒಲಿಂಪಿಕೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಸುವೊಲೊ 2–1ರ ಜಯ ಸಾಧಿಸಿತು.

ಲಾಸಿಯೊ ಪರ ಲೂಯಿಸ್ ಆಲ್ಬೆರ್ಟೊ (33ನೇ ನಿಮಿಷ) ಗೋಲು ಗಳಿಸಿದರೆ ಸಸುವೊಲೊ ಪರ ಗ್ಯಾಕೋಮಾ ರಸ್ಪೊಡೊರಿ (52ನೇ ನಿಮಿಷ) ಮತ್ತುಫ್ರಾನ್ಸಿಸ್ಕೊ ಕಪುಟೊ (90+1) ಮಿಂಚಿದರು.ಬ್ರೆಸಿಯಾ ವಿರುದ್ಧ ರೋಮಾ ತಂಡ 3–1 ಗೋಲುಗಳಿಂದ ಜಯ ಗಳಿಸಿತು. ಫೆಡೆರಿಕೊ ಫಾಸಿಯೊ (48ನೇ ನಿಮಿಷ), ನಿಕೋಲೊ ಕಾಲಿನಿಚ್ (62ನೇ ನಿಮಿಷ) ಮತ್ತು ನಿಕೋಲಿ ಜೊನಿಲೊ (74ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.