ADVERTISEMENT

ಜಾಂಗ್‌ ಎರಡು ಗೋಲು: ಸೆವಿಲ್ಲಾ‌ ಚಾಂಪಿಯನ್‌

ಯೂರೋಪಾ ಲೀಗ್‌: ಇಂಟರ್ ಮಿಲಾನ್‌ ಎದುರು 3–2 ಗೋಲುಗಳ ಜಯ

ಏಜೆನ್ಸೀಸ್
Published 22 ಆಗಸ್ಟ್ 2020, 6:10 IST
Last Updated 22 ಆಗಸ್ಟ್ 2020, 6:10 IST
ಟ್ರೋಫಿಯೊಂದಿಗೆ ಸೆವಿಲ್ಲಾ ತಂಡದ ಆಟಗಾರರ ಸಂಭ್ರಮ– ರಾಯಿಟರ್ಸ್ ಚಿತ್ರ
ಟ್ರೋಫಿಯೊಂದಿಗೆ ಸೆವಿಲ್ಲಾ ತಂಡದ ಆಟಗಾರರ ಸಂಭ್ರಮ– ರಾಯಿಟರ್ಸ್ ಚಿತ್ರ   

ಕೊಲೊಗ್ನ, ಜರ್ಮನಿ: ಲೂಕ್‌ ಡಿ ಜಾಂಗ್ ಅವರು ಬಾರಿಸಿದ ಎರಡು ಗೋಲುಗಳ ಬಲದಿಂದ ಸೆವಿಲ್ಲಾ ತಂಡವು ದಾಖಲೆಯ ಆರನೇ ಬಾರಿ ಯೂರೋಪಾ ಲೀಗ್‌ನಲ್ಲಿ ಚಾಂಪಿಯನ್‌ ಆಗಿದೆ. ಶುಕ್ರವಾರ ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡವು 3–2ರಿಂದ ಇಂಟರ್‌ಮಿಲಾನ್‌ ತಂಡವನ್ನು ಮಣಿಸಿತು.

ಈ ಪಂದ್ಯದಲ್ಲಿ ಬೆಲ್ಜಿಯಂ ರಾಷ್ಟ್ರೀಯ ಆಟಗಾರ ರೊಮೇಲು ಲುಕಾಕು, ತಮ್ಮ ತಂಡ ಇಂಟರ್‌ಮಿಲಾನ್‌ ಹಾಗೂ ಎದುರಾಳಿ ಸೆವಿಲ್ಲಾ ಎರಡೂ ತಂಡಗಳ ಪರ ಗೋಲು ಗಳಿಸಿ ‘ಖಳನಾಯಕ‘ ಎನಿಸಿಕೊಂಡರು. 74ನೇ ನಿಮಿಷದಲ್ಲಿ ಸೆವಿಲ್ಲಾ ತಂಡದ ಡಿಗೊ ಕಾರ್ಲೊಸ್‌ ಅವರ ಓವರ್‌ಹೆಡ್‌ ಕಿಕ್‌ಅನ್ನು ತಡೆಯುವ ಯತ್ನದಲ್ಲಿ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡು ಸೇರಿಸಿ ‘ಉಡುಗೊರೆ’ ಗೋಲು ನೀಡಿದರು.

ಲುಕಾಕು ಅವರು ಆರಂಭದಲ್ಲೇ ಇಂಟರ್‌ಮಿಲಾನ್‌ನ ಮುನ್ನಡೆಗೆ ಕಾರಣವಾಗಿದ್ದರು. ಐದನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿ ತಂಡದ ಸಂಭ್ರಮಕ್ಕೆ ಕಾರಣವಾಗಿದ್ದರು. ಇದಾದ ಏಳು ನಿಮಿಷಗಳ ಬಳಿಕ ಲೂಕ್‌ ಡಿ ಜಾಂಗ್‌ ಕಾಲ್ಚಳಕ ತೋರಿ ಸಮಬಲ ಸಾಧಿಸಿದರು.

ADVERTISEMENT

33ನೇ ನಿಮಿಷದಲ್ಲಿ ಮತ್ತೊಂದು ಸೊಗಸಾದ ಗೋಲು ದಾಖಲಿಸಿದ ಜಾಂಗ್‌ ಅವರು ತಮ್ಮ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಮೂರು ನಿಮಿಷಗಳ ಅಂತರದಲ್ಲಿ ಡಿಗೊ ಗಾಡಿನ್‌ ಅವರು ಫ್ರಿ ಕಿಕ್‌ನಲ್ಲಿ ಹೆಡರ್‌ ಮೂಲಕ ಗೋಲು ಹೊಡೆದಾಗ ಸ್ಕೋರ್‌ ಸಮವಾಯಿತು.

74ನೇ ನಿಮಿಷದಲ್ಲಿ ಲುಕಾಕು ಅವರು ಎದುರಾಳಿ ತಂಡಕ್ಕೆ ನೀಡಿದ ‘ಉಡುಗೊರೆ ಗೋಲು‘ ದುಬಾರಿಯಾಗಿ ಪರಿಣಮಿಸಿತು. ಸೆವಿಲ್ಲಾ ಜಯದ ಸಂಭ್ರಮದಲ್ಲಿ ಮಿಂದೆದ್ದಿತು.

ಕಳೆದ ಏಳು ಆವೃತ್ತಿಗಳಲ್ಲಿ ಸೆವಿಲ್ಲಾ ತಂಡಕ್ಕೆ ಇದು ನಾಲ್ಕನೇ ಪ್ರಶಸ್ತಿ.

ಸೆಮಿಫೈನಲ್‌ ಹಣಾಹಣಿಯಲ್ಲಿ ಸೆವಿಲ್ಲಾ ತಂಡವು 2–1ರಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಸೋಲುಣಿಸಿತ್ತು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಇಂಟರ್‌ ಮಿಲಾನ್ ತಂಡವು 5–0ಯಿಂದ ಶಕ್ಟರ್‌ ಡೊನೆಸ್ಕ್‌ ಎದುರು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.