ADVERTISEMENT

ಮಹಿಳಾ ಯೂರೊ ಕಪ್ ಫುಟ್‌ಬಾಲ್‌: ಇಂಗ್ಲೆಂಡ್‌ ಚಾಂಪಿಯನ್‌

ರಾಯಿಟರ್ಸ್
Published 1 ಆಗಸ್ಟ್ 2022, 10:52 IST
Last Updated 1 ಆಗಸ್ಟ್ 2022, 10:52 IST
ಇಂಗ್ಲೆಂಡ್‌ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಲಂಡನ್‌:ಎಎಫ್‌ಪಿ): ಕ್ಲೋಯಿ ಕೆಲ್ಲಿ ಅವರು ಹೆಚ್ಚುವರಿ ಅವಧಿಯಲ್ಲಿ ತಂದಿತ್ತ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ, ಮಹಿಳಾ ಯೂರೊ ಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿ ಜಯಿಸಿತು.

ವೆಂಬ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ದಾಖಲೆ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ 2–1 ಗೋಲುಗಳಿಂದ ಜರ್ಮನಿ ತಂಡವನ್ನು ಮಣಿಸಿತು.

ರೋಚಕ ಪೈಪೋಟಿ ನಡೆದ ಪಂದ್ಯದ ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 1–1 ರಲ್ಲಿ ಸಮಬಲ ಸಾಧಿಸಿದ್ದವು. ಇಂಗ್ಲೆಂಡ್‌ನ ಎಲಾ ಟೂನ್ 62ನೇ ನಿಮಿಷದಲ್ಲಿ ಗೋಲು ಗಳಿಸಿದರೆ, 17 ನಿಮಿಷಗಳ ಬಳಿಕ ಜರ್ಮನಿಯ ಲಿನಾ ಮಗುಲ್ ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು.

ADVERTISEMENT

ಆ ಬಳಿಕ ಎರಡೂ ತಂಡಗಳು ಗೆಲುವಿನ ಗೋಲಿಗಾಗಿ ಪ್ರಯತ್ನ ನಡೆಸಿದರೂ ಯಶಸ್ಸು ಲಭಿಸಲಿಲ್ಲ. ಇದರಿಂದ ವಿಜೇತರನ್ನು ನಿರ್ಣಯಿಸಲು ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು. 110ನೇ ನಿಮಿಷದಲ್ಲಿ ಫಾರ್ವರ್ಡ್‌ ಆಟಗಾರ್ತಿ ಕೆಲ್ಲಿ ಗೆಲುವಿನ ಗೋಲು ಗಳಿಸಿದರು. ಇಂಗ್ಲೆಂಡ್ ಮಹಿಳಾ ತಂಡ ಪ್ರಮುಖ ಟೂರ್ನಿಯೊಂದರಲ್ಲಿ ಪ್ರಶಸ್ತಿ ಜಯಿಸಿದ್ದು ಇದೇ ಮೊದಲು.

ದಾಖಲೆ ಸಂಖ್ಯೆಯ ಪ್ರೇಕ್ಷಕರು: ಮಹಿಳಾ ಯೂರೊ ಕಪ್‌ ಫೈನಲ್‌ ಪಂದ್ಯ ದಾಖಲೆ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯಿತು. ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು 87,192 ಮಂದಿ ವೀಕ್ಷಿಸಿದರು. ಯೂರೊ ಕಪ್‌ ಫುಟ್‌ಬಾಲ್‌ ಇತಿಹಾಸದಲ್ಲಿ ಪುರುಷರ ಮತ್ತು ಮಹಿಳೆಯರ ಪಂದ್ಯಕ್ಕೆ ಇಷ್ಟೊಂದು ಸಂಖ್ಯೆಯ ಪ್ರೇಕ್ಷಕರು ಸೇರಿರಲಿಲ್ಲ. 1964ರ ಪುರುಷರ ಟೂರ್ನಿಯ ಸ್ಪೇನ್‌ ಮತ್ತು ಸೋವಿಯತ್‌ ಯೂನಿಯನ್‌ ನಡುವಿನ ಫೈನಲ್‌ ಪಂದ್ಯಕ್ಕೆ 79,115 ಪ್ರೇಕ್ಷಕರು ಸೇರಿದ್ದು ಇದುವರೆಗಿನ ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.