ADVERTISEMENT

ಹೆಪ್ಟಥ್ಲಾನ್‌ನಲ್ಲಿ ಭರವಸೆಯ ಅಥ್ಲೀಟ್‌ ಧನುಷಾ

ಮಹೇಶ ಕನ್ನೇಶ್ವರ
Published 2 ಡಿಸೆಂಬರ್ 2018, 19:45 IST
Last Updated 2 ಡಿಸೆಂಬರ್ 2018, 19:45 IST
ಧನುಷಾ ಆಟದ ವೈಖರಿ.
ಧನುಷಾ ಆಟದ ವೈಖರಿ.   

ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಅಮೋಘ ಸಾಧನೆ ಮಾಡಿದ ಈ ಅಥ್ಲೀಟ್ ಕ್ರೀಡಾಪ್ರಿಯರ ಗಮನ ಸೆಳೆದರು; ಮನಗೆದ್ದರು. ಆಟೋ ರಿಕ್ಷಾ ಚಾಲಕನ ಮಗಳಾಗಿರುವ ಎಂ.ಆರ್‌. ಧನುಷಾ ಬಡತನದ ನಡುವೆಯೂ ಚಿನ್ನಕ್ಕೆ ಕೊರಳೊಡ್ಡಿ ನಗೆಸೂಸಿದರು.

ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಕಳೆದ ವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ ಸಾಧನೆ ಮಾಡಿರುವ ಧನುಷಾ, ತಮ್ಮ ಕ್ರೀಡಾ ಜೀವನದ ಪದಕಗಳ ಪಟ್ಟಿಗೆ ಮತ್ತೊಂದನ್ನು ಸೇರಿಸಿಕೊಂಡರು. ಅಥ್ಲೆಟಿಕ್ಸ್‌ನ ಕಠಿಣ ಸ್ಪರ್ಧೆಗಳಲ್ಲಿ ಒಂದಾಗಿರುವ ಹೆಪ್ಟಥ್ಲಾನ್‌ನಲ್ಲಿ ಪದಕ ಗೆಲ್ಲಬೇಕಾದರೆ ಕಠಿಣ ಶ್ರಮ ಅಗತ್ಯ. ಈ ಸವಾಲನ್ನು ಮೆಟ್ಟಿ ನಿಂತು ಭರವಸೆಯ ಟ್ರ್ಯಾಕ್‌ನಲ್ಲಿ ಯಶಸ್ಸು ಕಂಡುಕೊಳ್ಳುತ್ತಿರುವ ಧನುಷಾ ಅವರ ಸಾಧನೆಗೆ ಪೋಷಕರೂ ಖುಷಿಗೊಂಡಿದ್ದಾರೆ.

ಬೆಂಗಳೂರಿನ ವಿದ್ಯಾನಗರದಲ್ಲಿರುವ ಕ್ರೀಡಾ ವಸತಿನಿಲಯದಲ್ಲಿ ಅಕ್ಕ ಅನುಷಾ ಅವರಿಗೆ ಆಯ್ಕೆ ಪ್ರಕ್ರಿಯೆಗೆ ಜೊತೆಯಲ್ಲಿ ಹೋಗಿದ್ದ ಸಂದರ್ಭದಲ್ಲಿ ಧನುಷಾ ಅವರಲ್ಲಿ ಕ್ರೀಡಾ ಸ್ಫೂರ್ತಿಯ ಕಿಡಿ ಹೊತ್ತಿದ್ದು. ಮಂಗಳೂರಿನ ಅಥ್ಲೆಟಿಕ್ಸ್‌ ಕೋಚ್‌ ದಾಮೋದರ ಗೌಡ ಅವರ ಕಣ್ಣಿಗೆ ಬಿದ್ದ ನಂತರ ಅವರ ಕ್ರೀಡಾಜೀವನ ಬೆಳಗಿತು. ವಿದ್ಯಾನಗರ ವಸತಿ ನಿಲಯದಿಂದಲೇ ಅವರ ಕ್ರೀಡಾ ತರಬೇತಿ ಆರಂಭಗೊಂಡಿತು. ಅಲ್ಲಿ ಅಶೋಕ ಮಂಟೂರ್‌ ಅವರ ಗರಡಿಯಲ್ಲಿ ಕ್ರೀಡಾ ಪಟ್ಟುಗಳನ್ನು ಕಲಿತರು. ಕೆಲವೇ ವರ್ಷಗಳ ತರಬೇತಿಯಿಂದ ರಾಜ್ಯ–ರಾಷ್ಟ್ರಮಟ್ಟದಲ್ಲಿ ಹಲವಾರು ಕೂಟಗಳಲ್ಲಿ ಪದಕ ಗೆದ್ದರು.

ADVERTISEMENT

ಧನುಷಾ ಅವರು ಜನಿಸಿದ್ದು ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ. ಈಗ ಮೈಸೂರಿನ ಡಿವೈಇಎಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿನ ಬಾಸುದೇವ ಸೋಮಾನಿ ಕಾಲೇಜಿನ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಅವರು. ತಂದೆ ಮಂಜು ಆಟೊ ರಿಕ್ಷಾ ಚಾಲಕ. ತಾಯಿ ರುಕ್ಮಿಣಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ ದಾಖಲೆ ಮಾಡಿದ್ದ ಅವರು ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದಿದ್ದರು. 2013ರಿಂದ ರಾಷ್ಟ್ರಮಟ್ಟದಲ್ಲಿ ಪದಕ ಗೆಲ್ಲುತ್ತಿದ್ದಾರೆ. 2017ರಲ್ಲಿ ಗುಂಟೂರಿನಲ್ಲಿ ನಡೆದಿದ್ದ ಅಥ್ಲೆಟಿಕ್‌ ಕೂಟದ ಹೆಪ್ಟಥ್ಲಾನ್‌ನಲ್ಲಿ ಚಿನ್ನ ಗೆದ್ದಿದ್ದರು. ಕೊಯಮತ್ತೂರಿನಲ್ಲಿ ನಡೆದ ಫೆಡರೇಷನ್‌ ಕಪ್‌ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಮೂಡುಬಿದಿರೆಯಲ್ಲಿ 4708 ಪಾಯಿಂಟ್ಸ್‌ ಗಳಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಜಪಾನ್‌ನಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲೂ ಪಾಲ್ಗೊಂಡಿದ್ದಾರೆ.

ಸ್ಪರ್ಧೆಯ ಬಗ್ಗೆ...

ಹೆಪ್ಟಥ್ಲಾನ್‌ ಏಳು ಸ್ಪರ್ಧೆಗಳಿಂದ ಕೂಡಿರುತ್ತದೆ. 200 ಮೀ ಓಟ, 800 ಮೀ ಓಟ, 100 ಮೀ ಹರ್ಡಲ್ಸ್‌, ಶಾಟ್‌ಪಟ್‌, ಜಾವೆಲಿನ್‌ ಥ್ರೋ, ಹೈಜಂಪ್‌, ಲಾಂಗ್ ಜಂಪ್‌ ಸ್ಪರ್ಧೆಗಳು ಇದರಲ್ಲಿ ಇರುತ್ತವೆ. ಎಲ್ಲ ಸ್ಪರ್ಧೆಗಳಲ್ಲಿ ಅಥ್ಲೀನ ಸಾಮರ್ಥ್ಯ ಆಧರಿಸಿ ಪಾಯಿಂಟ್ಸ್‌ ನೀಡಲಾಗುತ್ತದೆ.

ಸ್ಫೂರ್ತಿ ತುಂಬಿದ ಗೆಲುವು

‘ಟ್ರ್ಯಾಕ್‌ನಲ್ಲಿ ಪ್ರತಿ ದಿನ ಆರು ತಾಸು ಅಭ್ಯಾಸ ಮಾಡುತ್ತಿದ್ದೆ. ಈ ಬಾರಿ ಅಂತರ ವಿವಿ ಕೂಟದ ಚಿನ್ನದ ಮೇಲೆ ಕಣ್ಣಿಟ್ಟಿದ್ದೆ. ಕಾಲೇಜಿಗೆ ಸೇರುವಾಗ ಚಿನ್ನ ಗೆಲ್ಲುವ ಭರವಸೆ ನೀಡಿದ್ದೆ. ಅದನ್ನು ಈಗ ಸಾಧಿಸಿದ್ದೇನೆ’ ಎಂದು ಧನುಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.