ADVERTISEMENT

ಸಿಂಧು, ಸಮೀರ್ ಮೇಲೆ ನಿರೀಕ್ಷೆ

ಆಸ್ಟ್ರೇಲಿಯನ್‌ ಓಪನ್‌ ವಿಶ್ವ ಟೂರ್‌ ಸೂಪರ್‌ 300 ಟೂರ್ನಿ: ಇಂದಿನಿಂದ ಅರ್ಹತಾ ಪಂದ್ಯಗಳೊಂದಿಗೆ ಆರಂಭ

ಏಜೆನ್ಸೀಸ್
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಸಿಡ್ನಿ (ಪಿಟಿಐ): ಭಾರತದ ಪಿ.ವಿ.ಸಿಂಧು ಅವರು ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದ್ದಾರೆ. ಸಮೀರ್‌ ವರ್ಮಾ ಕೂಡ ಉತ್ತಮ ಸಾಮರ್ಥ್ಯ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ‌

ಮಂಗಳವಾರದಿಂದ ಇಲ್ಲಿ ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್ ವಿಶ್ವ ಟೂರ್‌ ಸೂಪರ್‌ 300 ಟೂರ್ನಿಯ ಅರ್ಹತಾ ಪಂದ್ಯಗಳು ನಡೆಯಲಿದ್ದು ಇವರಿಬ್ಬರು ಭಾರತದ ಸವಾಲನ್ನು ಮುನ್ನಡೆಸುವರು.

ಇಂಡಿಯಾ ಓಪನ್‌ ಹಾಗೂ ಸಿಂಗಪುರ್‌ ಓಪನ್‌ ಟೂರ್ನಿಗಳಲ್ಲಿ ಸೆಮಿಫೈನಲ್‌ ತಲುಪಿದ್ದ ಸಿಂಧುಗೆ ಈ ವರ್ಷ ಪ್ರಶಸ್ತಿ ಮರೀಚಿಕೆಯಾಗಿದೆ. ಕರೋಲಿನಾ ಮರಿನ್‌, ಸಂಗ್‌ ಜಿ ಹ್ಯೂನ್‌, ಬಿಂಗ್‌ ಜಿಯಾವೊ ಅವರಂತಹ ದಿಗ್ಗಜ ಆಟಗಾರ್ತಿಯರೆದುರಿನ ಸೋಲು ಅವರನ್ನು ಹತಾಶೆಗೆ ತಳ್ಳಿದೆ.

ADVERTISEMENT

ಟೂರ್ನಿಯ ಪ್ರಥಮ ಸುತ್ತಿನ ಪಂದ್ಯ ದಲ್ಲಿ, ಅರ್ಹತಾ ಸುತ್ತಿನಿಂದ ಗೆದ್ದು ಬಂದ ಆಟಗಾರ್ತಿಯನ್ನು ಎದುರಿಸಲಿರುವ ಸಿಂಧು, ಆ ಬಳಿಕ ಥಾಯ್ಲೆಂಡ್‌ನ ಪಾರ್ನ್‌ಪವೀ ಚೊಚುವಾಂಗ್‌ ಅವರಿಗೆ ಎದುರಾಗುವ ಸಾಧ್ಯತೆಯಿದೆ.

ವಿಶ್ವ ಕ್ರಮಾಂಕದಲ್ಲಿ ಸಮೀರ್‌ 12ನೇ ಸ್ಥಾನದಲ್ಲಿದ್ದು, ಟೂರ್ನಿಯ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಲೀ ಜಿ ಜಿಯಾ ಸವಾಲಿಗೆ ಸಜ್ಜಾಗಲಿದ್ದಾರೆ. ಸುದಿರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮಲೇಷ್ಯಾ ಆಟಗಾರನ ಎದುರು ಸಮೀರ್‌ ಮುಗ್ಗರಿಸಿ ದ್ದರು. ಇಲ್ಲಿ ಆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಹೊಂದಿದ್ದಾರೆ.

ಬಿ. ಸಾಯಿಪ್ರಣೀತ್‌, ಎಚ್‌.ಎಸ್‌. ಪ್ರಣಯ್‌, ಪಿ.ಕಶ್ಯಪ್‌, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ, ಅಶ್ವಿನಿ ಪೊನ್ನಪ್ಪ, ಎನ್‌. ಸಿಕ್ಕಿ ರೆಡ್ಡಿ, ಚಿರಾಗ್‌ ಶೆಟ್ಟಿ, ಮನು ಅತ್ರಿ ಹಾಗೂ ಬಿ.ಸುಮಿತ್‌ ರೆಡ್ಡಿ, ಲಕ್ಷ್ಯ ಸೇನ್‌ ಅವರು ಟೂರ್ನಿಯ ವಿವಿಧ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.