ADVERTISEMENT

ಅಧಿಕಾರಿಗಳಿಂದ ‘ಕಿರುಕುಳ’: ಮನು ಆರೋಪ ಅಲ್ಲಗಳೆದ ಏರ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 18:40 IST
Last Updated 21 ಫೆಬ್ರುವರಿ 2021, 18:40 IST
ಮನು ಭಾಕರ್‌–ಎಪಿ ಚಿತ್ರ
ಮನು ಭಾಕರ್‌–ಎಪಿ ಚಿತ್ರ   

ಬೆಂಗಳೂರು: ‘ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತನಗೆ ‘ಕಿರುಕುಳ‘ ನೀಡಿದ್ದಾರೆ. ಎಲ್ಲ ದಾಖಲೆಗಳಿದ್ದರೂ ವಿಮಾನ ಹತ್ತಲು ಅವಕಾಶ ನೀಡಲಿಲ್ಲ‘ ಎಂದು ಮಹಿಳಾ ಶೂಟರ್ ಮನು ಭಾಕರ್ ಮಾಡಿದ್ದ ಆರೋಪವನ್ನು ಏರ್ ಇಂಡಿಯಾ ಸಂಸ್ಥೆಯು ಭಾನುವಾರ ಅಲ್ಲಗಳೆದಿದೆ. ಈ ಕುರಿತು ಅದು ಹೇಳಿಕೆ ಬಿಡುಗಡೆ ಮಾಡಿದೆ.

‘ಮನು ಅವರು ಏರ್ ಪಿಸ್ತೂಲ್‌ ಮತ್ತು ಶೂಟಿಂಗ್ ಉಪಕರಣಗಳನ್ನು ಹೊಂದಿದ್ದರಿಂದ, ಅವುಗಳನ್ನು ಸಾಗಿಸಲು ಬೇಕಾದ ವಿನಾಯಿತಿ ಪಡೆಯಬೇಕಿತ್ತು. ಅದಕ್ಕೆ ಅಗತ್ಯ ಕಡ್ಡಾಯ ದಾಖಲೆಗಳನ್ನು ಅಧಿಕಾರಿಗಳು ಕೇಳಿದ್ದಾರೆ.ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಶಸ್ತ್ರಾಸ್ತ್ರಗಳನ್ನು ಸಾಗಿಸಲು ವಿನಾಯಿತಿ ನೀಡಲು ಅಗತ್ಯವಾದ ದಾಖಲೆಗಳನ್ನು ಮನು ಅವರು ಮೊದಲು ನೀಡಿರಲಿಲ್ಲ. ಬಳಿಕ ಶಸ್ತ್ರಾಸ್ತ್ರಗಳ ಸಾಗಣೆಗೆ ನಿಗದಿತ ಶುಲ್ಕವನ್ನು ಪಾವತಿಸುವ ಮಾಹಿತಿ ಹಾಗೂ ಮಾನದಂಡಗಳ ಕುರಿತು ಅವರಿಗೆ ತಿಳಿಸಲಾಯಿತು. ಭಾಕರ್ ಅಗತ್ಯವಾದ ದಾಖಲೆಯನ್ನು ನೀಡಿದ ಕೂಡಲೇ, ಶಸ್ತ್ರಾಸ್ತ್ರ ಸೇರಿದಂತೆ ಅವರ ಶೂಟಿಂಗ್ ಉಪಕರಣಗಳನ್ನು ಸಾಗಣೆಗೆ ಸ್ವೀಕರಿಸಲಾಗಿದೆ‘ ಎಂದು ಏರ್ ಇಂಡಿಯಾ ಹೇಳಿದೆ.

‘ಅಧಿಕಾರಿಗಳು ಮನು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪಗಳು ಸುಳ್ಳು. ಇದಕ್ಕೆ ಸಿಸಿಟಿವಿ ದೃಶ್ಯಾವಳಿಗಳ ಪುರಾವೆಯಿದೆ‘ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ಏರ್‌ಇಂಡಿಯಾ ಸಿಬ್ಬಂದಿ ಅನುಮತಿ ನಿರಾಕರಿಸಿದ ಕುರಿತು ಶುಕ್ರವಾರ ಟ್ವಿಟ್ವರ್‌ನಲ್ಲಿ ಮನು ಭಾಕರ್ ಆರೋಪ ಮಾಡಿದ್ದರು. ತನ್ನ ಬಳಿ ಅಗತ್ಯವಿರುವ ಎಲ್ಲಾ ದಾಖಲೆಗಳು ಇದ್ದರೂ ಪ್ರಯಾಣಕ್ಕಾಗಿ ನನ್ನ ಬಳಿ ₹ 10,200 ರೂಪಾಯಿ ಲಂಚವನ್ನು ಕೇಳಿದ್ದಾರೆ ಎಂದಿದ್ದರು. ನನ್ನ ಬಳಿ ಎರಡು ಗನ್‌ಗಳು ಹಾಗೂ ಮದ್ದು ಗುಂಡುಗಳು ಇವೆ ಎನ್ನುವ ಕಾರಣಕ್ಕೆ ಏರ್‌ಇಂಡಿಯಾ ಅಧಿಕಾರಿ ಮನೋಜ್ ಗುಪ್ತಾ ಹಾಗೂ ಸಿಬ್ಬಂದಿ ತನ್ನನ್ನು ಅವಮಾನಿಸುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಹಾಯವನ್ನು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.