ADVERTISEMENT

ವಿಶ್ವಕಪ್ ಶೂಟಿಂಗ್‌: ಚಿನ್ನದ ‘ಐಶ್ವರ್ಯ’

50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಒಲಿದ ಪದಕ

ಪಿಟಿಐ
Published 16 ಜುಲೈ 2022, 12:37 IST
Last Updated 16 ಜುಲೈ 2022, 12:37 IST
ಚಿನ್ನದ ಪದಕದೊಂದಿಗೆ ಸಂಭ್ರಮಿಸಿದ ಐಶ್ವರ್ಯ ಪ್ರತಾಪ್‌ ಸಿಂಗ್ ತೋಮರ್– ಪಿಟಿಐ ಚಿತ್ರ
ಚಿನ್ನದ ಪದಕದೊಂದಿಗೆ ಸಂಭ್ರಮಿಸಿದ ಐಶ್ವರ್ಯ ಪ್ರತಾಪ್‌ ಸಿಂಗ್ ತೋಮರ್– ಪಿಟಿಐ ಚಿತ್ರ   

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಐಶ್ವರ್ಯ ಪ್ರತಾಪ್ ಸಿಂಗ್‌ ತೋಮರ್‌ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಶನಿವಾರ ನಡೆದ ಟೂರ್ನಿಯ ಪುರುಷರ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್ ವಿಭಾಗದ ಫೈನಲ್‌ನಲ್ಲಿ ತೋಮರ್‌ 16-12ರಿಂದ ಯೂತ್ ಒಲಿಂಪಿಕ್ ಚಾಂಪಿಯನ್, ಹಂಗರಿಯ ಜಲಾನ್ ಪೆಕ್ಲರ್ ಅವರನ್ನು ಮಣಿಸಿದರು.

ಹಂಗರಿಯ ಇಸ್ತವಾನ್ ಪೆನ್‌ ಕಂಚು ತಮ್ಮದಾಗಿಸಿಕೊಂಡರು.

ADVERTISEMENT

ಜೂನಿಯರ್ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ 21 ವರ್ಷದ ತೋಮರ್, ಅರ್ಹತಾ ಸುತ್ತಿನಲ್ಲಿ 593 ಅಂಕ ಗಳಿಸಿ ಅಗ್ರಸ್ಥಾನ ಗಳಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಅವರಿಗೆ ಇದು ಎರಡನೇ ಚಿನ್ನ. ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನ ಒಲಿದಿತ್ತು.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಚಿನ್ನದ ಪದಕ. ಸದ್ಯ ಒಂಬತ್ತು ಪದಕ (4 ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚು) ಜಯಿಸಿರುವ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.

50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಫೈನಲ್ ತಲುಪಿದ್ದ ಭಾರತದ ಇನ್ನೊಬ್ಬ ಶೂಟರ್ ಚೈನ್ ಸಿಂಗ್‌ ಏಳನೇ ಸ್ಥಾನ ಗಳಿಸಿದರು.

ಮನು ಭಾಕರ್‌ಗೆ ಆಘಾತ: ಪದಕ ಗೆಲ್ಲುವ ಫೆವರೀಟ್‌ ಎನಿಸಿದ್ದ ಮನು ಭಾಕರ್ ನಿರಾಸೆ ಅನುಭವಿಸಿದರು. 2019ರ ವಿಶ್ವಚಾಂಪಿಯನ್‌ ಶೂಟರ್‌, ಮಹಿಳೆಯರ 25 ಮೀಟರ್ಸ್ ವಿಭಾಗದ ಫೈನಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಈ ವಿಭಾಗದ ಚಿನ್ನವು ಸಿಂಗಪುರದ ಕ್ಸಿ ಹಾಂಗ್‌ ತೆಹ್‌ ಅವರ ಪಾಲಾಯಿತು.

ಅಂಜುಮ್ ಮೌದ್ಗಿಲ್ ಅವರು ಮಹಿಳೆಯರ 50 ಮೀ. ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ. ಭಾನುವಾರ ಫೈನಲ್ಸ್ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.