ADVERTISEMENT

ನಡಿಗೆ ಸ್ಪರ್ಧೆಯಲ್ಲಿ ಚಿನ್ನ: ಪ್ರಿಯಾಂಕಾ, ಅಕ್ಷದೀಪ್‌ಗೆ ಒಲಿಂಪಿಕ್ಸ್ ಟಿಕೆಟ್‌

ರಾಷ್ಟ್ರೀಯ ನಡಿಗೆ ಸ್ಪರ್ಧೆಯಲ್ಲಿ ಚಿನ್ನ: ವಿಶ್ವ ಚಾಂಪಿಯನ್‌ಷಿಪ್‌ಗೂ ಅರ್ಹತೆ

ಪಿಟಿಐ
Published 14 ಫೆಬ್ರುವರಿ 2023, 11:49 IST
Last Updated 14 ಫೆಬ್ರುವರಿ 2023, 11:49 IST
‍ಪ್ರಿಯಾಂಕಾ ಗೋಸ್ವಾಮಿ– ಪ್ರಜಾವಾಣಿ ಸಂಗ್ರಹ
‍ಪ್ರಿಯಾಂಕಾ ಗೋಸ್ವಾಮಿ– ಪ್ರಜಾವಾಣಿ ಸಂಗ್ರಹ   

ರಾಂಚಿ: ಅಕ್ಷದೀಪ್‌ ಸಿಂಗ್ ಹಾಗೂ ಪ್ರಿಯಾಂಕಾ ಗೋಸ್ವಾಮಿ ಅವರು ರಾಷ್ಟ್ರೀಯ ಓಪನ್ ನಡಿಗೆ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷ ಮಹಿಳೆಯರ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಈ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ ಮತ್ತು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ 20 ಕಿ.ಮೀ ವಿಭಾಗದ ಸ್ಪರ್ಧೆಯನ್ನು ಅಕ್ಷದೀಪ್‌ 1 ತಾಸು 19 ನಿಮಿಷ 55 ಸೆಕೆಂಡುಗಳಲ್ಲಿ ಕೊನೆಗೊಳಿಸಿದರು. ಇದರೊಂದಿಗೆ 22 ವರ್ಷದ ಪಂಜಾಬ್ ಅಥ್ಲೀಟ್‌, ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಈ ಹಿಂದೆ ಸಂದೀಪ್‌ ಕುಮಾರ್ (1 ತಾಸು 20 ನಿ. 16 ಸೆ.) ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿಹಾಕಿದರು. ಸಂದೀಪ್‌ ಈ ಬಾರಿ ಏಳನೇ ಸ್ಥಾನ (1 ತಾಸು 23 ನಿ. 28 ಸೆ.) ಗಳಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯಲಿದೆ. ಒಲಿಂಪಿಕ್ಸ್ ಹಾಗೂ ವಿಶ್ವಚಾಂಪಿಯನ್‌ಷಿಪ್‌ಗೆ 1 ತಾಸು 20 ನಿ. 10 ಸೆ. ಸಮಯ ಅರ್ಹತಾ ಮಾನದಂಡವಾಗಿದೆ.

ADVERTISEMENT

ಅಕ್ಷದೀಪ್ ಅವರು ಕಳೆದ ವರ್ಷ ಕರ್ನಾಟಕದ ಮೂಡಬಿದಿರೆಯಲ್ಲಿ ನಡೆದ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದರು.

ಮಹಿಳೆಯರ 20 ಕಿ.ಮೀ. ವಿಭಾಗದ ಸ್ಪರ್ಧೆಯಲ್ಲಿ ಪ್ರಿಯಾಂಕಾ ನಿರೀಕ್ಷೆಯಂತೆ ಚಿನ್ನ ಜಯಿಸಿದರು. ಅವರು 1 ತಾಸು 28 ನಿ. 50 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಾಷ್ಟ್ರೀಯ ದಾಖಲೆ ಅವರದೇ ಹೆಸರಿನಲ್ಲಿದೆ. 2021ರಲ್ಲಿ 1 ತಾಸು 28 ನಿ. 45 ಸೆಕೆಂಡುಗಳ ಸಾಧನೆ ಮಾಡಿ ಅವರು ದಾಖಲೆ ಸ್ಥಾಪಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಒಲಿಂಪಿಕ್ಸ್ ಅರ್ಹತಾ ಮಾನದಂಡದ ಸಮಯ 1 ತಾಸು 29 ನಿ. 20 ಸೆಕೆಂಡು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.