ADVERTISEMENT

ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ

ಪಿಟಿಐ
Published 10 ಏಪ್ರಿಲ್ 2025, 1:05 IST
Last Updated 10 ಏಪ್ರಿಲ್ 2025, 1:05 IST
<div class="paragraphs"><p>ಸಿಂಧು </p></div>

ಸಿಂಧು

   

ನಿಂಗ್ಬೊ: ಭಾರತದ ಪಿ.ವಿ. ಸಿಂಧು  ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. 

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ 29 ವರ್ಷದ ಸಿಂಧು 21–15, 21–19ರಿಂದ ಇಂಡೊನೇಷ್ಯಾದ ಎಸ್ಟರ್ ನುರುಮಿ ವಾರ್ಡೊಯೊ ಅವರನ್ನು ಸೋಲಿಸಿದರು. ಸಿಂಧು ಅವರು 17ನೇ  ಶ್ರೇಯಾಂಕದ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದಾರೆ. 19 ವರ್ಷದ ವಾರ್ಡೊಯೊ ಅವರು 36ನೇ ರ‍್ಯಾಂಕ್ ಹೊಂದಿದ್ದಾರೆ. 44 ನಿಮಿಷ ನಡೆದ ಪಂದ್ಯದಲ್ಲಿ ಸಿಂಧು ಪಾರಮ್ಯ ಮೆರೆದರು. 

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿರಣ್ ಜಾರ್ಜ್ 21–16, 21–8 ರಿಂದ ಕಜಕಸ್ತಾನದ ಡಿಮಿಟ್ರಿ ಪನಾರಿನ್ ಅವರನ್ನು ಸೋಲಿಸಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಟೂರ್ನಿಯ ಇನ್ನುಳಿದ ಪಿ.ವಿ. ಸಿಂಧು  ಭಾರತಕ್ಕೆ ನಿರಾಶೆ ಕಾಡಿತು. ಅನುಭವಿ ಆಟಗಾರ ಎಚ್‌.ಎಸ್‌.ಪ್ರಣಯ್ ಅವರು ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಮತ್ತು ಅನುಪಮಾ ಉಪಾಧ್ಯಾಯ ಅವರೂ ನಿರ್ಗಮಿಸಿದರು.

32ರ ಸುತ್ತಿನ ಪಂದ್ಯದಲ್ಲಿ ಚೀನಾದ ಝು ಗುವಾಂಗ್ ಮೂರು ಗೇಮ್‌ಗಳ ಹೋರಾಟದಲ್ಲಿ ಪ್ರಣಯ್ ಅವರನ್ನು 21–16, 12–21, 21–11 ರಿಂದ ಹಿಮ್ಮೆಟ್ಟಿಸಿದರು. ಈ ಪಂದ್ಯ 68 ನಿಮಿಷ ನಡೆಯಿತು.

ಆಕರ್ಷಿ 13–21, 7–21 ರಲ್ಲಿ ಚೀನಾದ ಹಾನ್ ಯು ಅವರಿಗೆ 31 ನಿಮಿಷಗಳಲ್ಲಿ ಮಣಿದರು. ಅನುಪಮಾ 13–21, 14–21 ರಲ್ಲಿ ಎಂಟನೇ ಶ್ರೇಯಾಂಕದ ರಟ್ಚನೋಕ್ ಇಂತಾನನ್ (ಥಾಯ್ಲೆಂಡ್‌) ಅವರಿಗೆ ಸೋತರು. ವಿಶ್ವ ಕ್ರಮಾಂಕದಲ್ಲಿ13ನೇ ಸ್ಥಾನದಲ್ಲಿರುವ ರಟ್ಚನೋಕ್ 36 ನಿಮಿಷಗಳಲ್ಲಿ ಗೆದ್ದರು.ಮಹಿಳೆಯರ ಡಬಲ್ಸ್‌ನಲ್ಲಿ ಪ್ರಿಯಾ ಕೊಂಜೆಂಗ್ಬಾಮ್– ಶ್ರುತಿ ಮಿಶ್ರಾ 11–21, 13–21 ರಲ್ಲಿ ಚೀನಾ ತೈಪಿಯ ಶುವೊ ಯುನ್ ಸುಂಗ್– ಚೀಯೆನ್‌ ಹುಯಿ ಯು ಅವರಿಗೆ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.