ADVERTISEMENT

ಏಷ್ಯನ್ ಅಥ್ಲೆಟಿಕ್ಸ್‌: ಗುಲ್ವೀರ್‌, ಪೂಜಾ, ನಂದಿನಿಗೆ ಸ್ವರ್ಣ

ಚಿನ್ನದ ಬೇಟೆ ಮುಂದುವರಿಸಿದ ಭಾರತ

ಪಿಟಿಐ
Published 30 ಮೇ 2025, 14:47 IST
Last Updated 30 ಮೇ 2025, 14:47 IST
<div class="paragraphs"><p>ಓಟ</p></div>

ಓಟ

   

ಗುಮಿ(ದಕ್ಷಿಣ ಕೊರಿಯಾ): ದೂರ ಅಂತರದ ಓಟಗಾರ ಗುಲ್ವೀರ್‌ ಸಿಂಗ್ ಅವರು 5,000 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡು ದಶಕದ ಹಿಂದಿನ ದಾಖಲೆ ಮುರಿದರು. ಅದೇ ಹಾದಿಯಲ್ಲಿ ಚಿನ್ನದ ಡಬಲ್ ಕೂಡ ಪೂರೈಸಿದರು. ಏಷ್ಯನ್ ಅಥ್ಲೆಟಿಕ್‌ ಕೂಟದಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದ್ದು, ಹೈಜಂಪ್‌ನಲ್ಲಿ ಪೂಜಾ ಸಿಂಗ್ ಮತ್ತು ಹೆಪ್ಟಾಥ್ಲಾನ್‌ನಲ್ಲಿ ನಂದಿನಿ ಅಗಸರ ಅವರೂ ಚಿನ್ನ ಗೆದ್ದು ಗಮನ ಸೆಳೆದರು.

ಐದು ದಿನಗಳ ಕೂಟದ ನಾಲ್ಕನೇ ದಿನವಾದ ಶುಕ್ರವಾರದವರೆಗೆ ಭಾರತ ಎಂಟು ಚಿನ್ನ, ಏಳು ಬೆಳ್ಳಿ ಮತ್ತು ಮೂರು ಕಂಚಿನ ‍ಪದಕಗಳನ್ನು  ಒಳಗೊಂಡಂತೆ 18 ಪ‍ದಕಗಳನ್ನು ಗಳಿಸಿ ಉತ್ತಮ ಪ್ರದರ್ಶನ ನೀಡಿದೆ. 2023ರ ಆವೃತ್ತಿಯಲ್ಲಿ ಪಡೆದಿದ್ದ 27 ಪದಕಗಳ ಸಾಧನೆ ದಾಟುವ ವಿಶ್ವಾಸದಲ್ಲಿದೆ. ಆ ವರ್ಷ ಆರು ಚಿನ್ನ ಗೆದ್ದಿದ್ದು, ಭಾರತ ಈಗಾಗಲೇ ಅದನ್ನು ಇಲ್ಲಿ ಉತ್ತಮಪಡಿಸಿದೆ.

ADVERTISEMENT

ಕೂಟದ ಮೊದಲ ದಿನ 10000 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ಗುಲ್ವೀರ್‌, ತೀವ್ರ ‍ಪೈಪೋಟಿ ಕಂಡುಬಂದ ಪುರುಷರ 5000 ಮೀ. ಓಟದಲ್ಲೂ ಮೊದಲಿಗರಾಗಿ ದೇಶದ ಶ್ರೇಷ್ಠ ದೂರ ಅಂತರ ಓಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಉತ್ತರ ಪ್ರದೇಶದ ಅತ್ರೌಲಿಯ ಗುಲ್ವೀರ್, 2023ರಲ್ಲಿ ಈ ಓಟದಲ್ಲಿ ಕಂಚಿನ ಪದಕ ಗಳಿಸಿದ್ದರು.

ರಾಷ್ಟ್ರೀಯ ದಾಖಲೆ ಹೊಂದಿರುವ ಗುಲ್ವೀರ್ 13ನಿ.24.77 ಸೆ. ಗಳೊಂದಿಗೆ ಓಟ ಪೂರೈಸಿ, ತಮಗೆ ತೀವ್ರ ಸ್ಪರ್ಧೆ ನೀಡಿದ್ದ ಥಾಯ್ಲೆಂಡ್‌ನ ಕೀರನ್ ತುಂತಿವೇಟ್‌ (13ನಿ.24.97 ಸೆ.) ಅವರನ್ನು ಹಿಂದೆಹಾಕಿದರು. ಜಪಾನ್‌ನ ನಗಿಯಾ ಮೊರಿ (13:25.06 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಹಿಂದಿನ ಚಾಂಪಿಯನ್‌ಷಿಪ್ ದಾಖಲೆಯನ್ನು (13:34.47 ಸೆ.) ಕತಾರ್‌ನ ಮೊಹಮದ್ ಅಲ್‌ ಗರ್ನಿ ಅವರು 2015ರಲ್ಲಿ ಸ್ಥಾಪಿಸಿದ್ದರು.

ಈ ಹಿಂದೆ ಭಾರತದ ಜಿ.ಲಕ್ಷ್ಮಣನ್ ಮಾತ್ರ 2017ರಲ್ಲಿ 10,000 ಮೀ. ಮತ್ತು 5,000 ಮೀ. ಓಟಗಳಲ್ಲಿ ಚಿನ್ನ ಗೆದ್ದಿದ್ದಾರೆ.

18 ವರ್ಷ ವಯಸ್ಸಿನ ಪೂಜಾ ಅವರು ಲಾಂಗ್‌ಜಂಪ್‌ನಲ್ಲಿ ತಮ್ಮ ಐದನೇ 1.89 ಮೀ. ದೂರ ಜಿಗಿದು, ಉಜ್ಬೇಕಿಸ್ತಾನದ ಸಫಿನಾ ಸದುಲ್ಲೇವಾ (1.86 ಮೀ.) ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದರು.‌

ಕಟ್ಟಡ ಕಾರ್ಮಿಕರ ಪುತ್ರಿ ಆಗಿರುವ ಹರಿಯಾಣದ ಹದಿಹರೆಯದ ಈ ಅಥ್ಲೀಟ್‌ ಪ್ರಮುಖ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. 2023ರಲ್ಲಿ ಏಷ್ಯನ್ 23 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ಮೂರನೇ ಅಥ್ಲೀಟ್‌:

ನಂದಿನಿ ಅವರು ಏಷ್ಯನ್ ಚಾಂಪಿಯನ್‌ಷಿಪ್‌ನ ಹೆಪ್ಟಥ್ಲಾನ್‌ನಲ್ಲಿ ಚಿನ್ನ ಗೆದ್ದ ಭಾರತದ ಮೂರನೇ ಅಥ್ಲೀಟ್‌ ಎನಿಸಿದರು. ಈ ಹಿಂದೆ ಸ್ವಪ್ನಾ ಬರ್ಮನ್ (2017) ಮತ್ತು ಸೋಮಾ ಬಿಸ್ವಾಸ್ (2005) ಚಿನ್ನ ಗೆದ್ದಿದ್ದರು.

ನಂದಿನಿ 5941 ಪಾಯಿಂಟ್ಸ್ ಸಂಗ್ರಹಿಸಿದರು. ಜಾವೆಲಿನ್‌ ಥ್ರೊನಲ್ಲಿ ಅವರು ಕಳಪೆ ಸಾಧನೆ (34.18 ಮೀ.) ತೋರಿದರೂ, 800 ಮೀ. ಓಟದಲ್ಲಿ ಉತ್ತಮ ಪ್ರದರ್ಶನ ನೀಡಿ ಮರಳಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟರು. ಚೀನಾದ ಲಿಯು ಜಿಂಗ್ವಿ (5869) ಬೆಳ್ಳಿ ಪದಕ ಗೆದ್ದರು.

ಮಹಿಳೆಯರ ಸ್ಟೀಪಲ್‌ಚೇಸ್‌ನಲ್ಲಿ ಹಾಲಿ ಚಾಂಪಿಯನ್ ಪಾರುಲ್ ಚೌಧರಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಅವರು 9ನಿ.12.46ಸೆ. ಅವಧಿ ತೆಗೆದುಕೊಂಡರು. ಕಜಕಸ್ತಾನದ ನೊರಾ ಜೆರುಟೊ ತನುಯಿ (9:10.46) ಮತ್ತು ಡೇಯ್ಸಿ ಜೆಪ್ಕೆಮಿ (9:27.51) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಪಡೆದರು.

ಜಾವೆಲಿನ್‌ ಫೈನಲ್‌:

ಭಾರತದ ಸಚಿನ್ ಯಾದವ್ ಮತ್ತು ಯುದ್ಧವೀರ್ ಸಿಂಗ್ ಅವರು 12 ಸ್ಪರ್ಧಿಗಳನ್ನು ಒಳಗೊಂಡಿರುವ ಜಾವೆಲಿನ್ ಥ್ರೊ ಫೈನಲ್ ಸುತ್ತಿಗೆ ಅರ್ಹತೆ ಪಡೆದರು. ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ (ಪಾಕಿಸ್ತಾನ) ಸಹ ಅಂತಿಮ ಸುತ್ತಿಗೆ ಮುನ್ನಡೆದಿದ್ದಾರೆ. ಸಚಿನ್ 79.62 ಮೀ. ದೂರ ಎಸೆದರೆ, ಯುದ್ಧವೀರ್ 76.67 ಮೀ. ದೂರ ಥ್ರೋ ಮಾಡಿದರು. ಅರ್ಹತಾ ಸುತ್ತಿನಲ್ಲಿ ನದೀಮ್ 86.34 ಮೀ. ದೂರ ಎಸೆದು ಮೊದಲಿಗರಾದರು.

ಪುರುಷರ ರಿಲೇ ತಂಡ ಅನರ್ಹ

ಇದಕ್ಕೆ ಮೊದಲು ಭಾರತದ ಪುರುಷರ 4x100 ಮೀ ರಿಲೇ ತಂಡವನ್ನು, ಬ್ಯಾಟನ್‌ ವಿನಿಯಮದ ವೇಳೆ ಆದ ಲೋಪದ ಕಾರಣ ಪೂರ್ವಭಾವಿ ಸುತ್ತಿನ ವೇಳೆ ಅನರ್ಹಗೊಳಿಸಲಾಗಿತ್ತು. ಪ್ರಣವ್‌ ಪ್ರಮೋದ್ ಗುರವ್, ರಗುಲ್‌ ಕುಮಾರ್ ಗನೇಶ್‌, ಮಣಿಕಂಡ ಹೋಬಳಿದಾರ ಮತ್ತು ಆಮ್ಲನ್ ಬೊರ್ಗೊಹೈನ್ ಅವರು ತಂಡದಲ್ಲಿದ್ದು, ವಿಶ್ವ ಅಥ್ಲೆಟಿಕ್ಸ್‌ನ ತಾಂತ್ರಿಕ ನಿಯಮ 24.7 ಉಲ್ಲಂಘಿಸಿದ ಕಾರಣ ಅನರ್ಹಗೊಳಿಸಲಾಯಿತು.

ಇಂಥಹದೇ ಕಾರಣಕ್ಕೆ ಮಲೇಷ್ಯಾದ ತಂಡವನ್ನೂ ಅನರ್ಹಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.