ADVERTISEMENT

ದಾಖಲೆ ಉತ್ತಮಪಡಿಸಿಕೊಂಡ ಅವಿನಾಶ್ ಸಬ್ಳೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 12:44 IST
Last Updated 6 ಜೂನ್ 2022, 12:44 IST

ರಬಾತ್, ಮೊರೊಕ್ಕೊ (ಪಿಟಿಐ): ಭಾರತದ ಅಥ್ಲೀಟ್ ಅವಿನಾಶ್‌ ಸಬ್ಳೆ, ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯನ್ನು ಎಂಟನೇ ಬಾರಿ ಉತ್ತಮಪಡಿಸಿಕೊಂಡರು.

ಮೊರೊಕ್ಕೊ ದೇಶದ ರಬಾತ್‌ನಲ್ಲಿ ಭಾನುವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ ಅವರು 8 ನಿಮಿಷ 12.48 ಸೆಕೆಂಡುಗಳಲ್ಲಿ ಗುರಿತಲುಪಿ ಐದನೇ ಸ್ಥಾನ ಪಡೆದುಕೊಂಡರು.

ಮಹಾರಾಷ್ಟ್ರದ ಸಬ್ಳೆ, ಮಾರ್ಚ್‌ ತಿಂಗಳಲ್ಲಿ ತಿರುವನಂತಪುರದಲ್ಲಿ ನಡೆದಿದ್ದ ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ನಲ್ಲಿ 8 ನಿ. 16.21 ಸೆಕೆಂಡುಗಳಲ್ಲಿ ಗುರಿತಲುಪಿದ್ದರು. ಆ ದಾಖಲೆಯನ್ನು ಮೂರು ಸೆಕೆಂಡುಗಳಿಂದ ಉತ್ತಮಪಡಿಸಿಕೊಂಡಿದ್ದಾರೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಕೆನ್ಯಾದ ಬೆಂಜಮಿನ್‌ ಕಿಗೆನ್‌ ಅವರನ್ನು ಹಿಂದಿಕ್ಕಲು ಸಬ್ಳೆ ಯಶಸ್ವಿಯಾದರು. ಬೆಂಜಮಿನ್ (8ನಿ. 17.32 ಸೆ.) ಎಂಟನೇ ಸ್ಥಾನ ಗಳಿಸಿದರು.

ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, ಸ್ಥಳೀಯ ಸ್ಪರ್ಧಿ ಸೋಫಿಯಾನ್‌ ಎಲ್‌ ಬಕಾಲಿ ಹೊಸ ಕೂಟ ದಾಖಲೆಯೊಂದಿಗೆ (7 ನಿ. 58.28 ಸೆ.) ಚಿನ್ನ ಗೆದ್ದರು. ಎಥಿಯೋಪಿಯದ ಲಮೆಚಾ ಗಿರ್ಮಾ (7:59.24) ಬೆಳ್ಳಿ, ಅದೇ ದೇಶದ ಹೈಲೆಮರಿಯನ್ ತೆಗೆನ್ ಕಂಚು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.