ADVERTISEMENT

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧು, ಶ್ರೀಕಾಂತ್‌ ಸವಾಲು ಅಂತ್ಯ

ಪಿಟಿಐ
Published 27 ಅಕ್ಟೋಬರ್ 2018, 19:43 IST
Last Updated 27 ಅಕ್ಟೋಬರ್ 2018, 19:43 IST

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರ ಸವಾಲು ಅಂತ್ಯಗೊಂಡಿದೆ.

ಶುಕ್ರವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಸಿಂಧು 13–21, 16–21ರ ನೇರ ಗೇಮ್‌ಗಳಿಂದ ಚೀನಾದ ಹೀ ಬಿಂಗ್‌ ಜಿಯಾವೊ ವಿರುದ್ಧ ಆಘಾತ ಕಂಡರು. ಈ ಹೋರಾಟ 40 ನಿಮಿಷ ನಡೆಯಿತು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಸಿಂಧು, ಮೊದಲ ಗೇಮ್‌ನಲ್ಲಿ ಕಿಂಚಿತ್ತೂ ಹೋರಾಟ ತೋರದೆ ಏಳನೇ ಶ್ರೇಯಾಂಕದ ಆಟಗಾರ್ತಿ ಬಿಂಗ್‌ ಜಿಯಾವೊ ಎದುರು ಶರಣಾದರು.

ADVERTISEMENT

ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಮೊದಲಾರ್ಧದಲ್ಲಿ ದಿಟ್ಟ ಆಟ ಆಡಿದ ಸಿಂಧು, ವಿರಾಮದ ನಂತರ ಮಂಕಾದರು‌. ಈ ವರ್ಷ ಸಿಂಧು, ಬಿಂಗ್‌ ಜಿಯಾವೊ ಎದುರು ಸೋತ ಸತತ ಎರಡನೇ ಪಂದ್ಯ ಇದಾಗಿದೆ. ಜುಲೈನಲ್ಲಿ ನಡೆದಿದ್ದ ಇಂಡೊನೇಷ್ಯಾ ಓಪನ್‌ ಟೂರ್ನಿಯ ಹೋರಾಟದಲ್ಲೂ ಭಾರತದ ಆಟಗಾರ್ತಿ ಸೋತಿದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಐದನೇ ಶ್ರೇಯಾಂಕದ ಆಟಗಾರ ಶ್ರೀಕಾಂತ್‌ 16–21, 19–21ರ ನೇರ ಗೇಮ್‌ಗಳಿಂದ ಜಪಾನ್‌ನ ಕೆಂಟೊ ಮೊಮೊಟಾ ಎದುರು ನಿರಾಸೆ ಕಂಡರು.

ಈ ವರ್ಷ ಮೊಮೊಟಾ ಎದುರು ಶ್ರೀಕಾಂತ್‌ ಸೋತ ಸತತ ಐದನೇ ಪಂದ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.