
ಲಖನೌ: ಅಗ್ರ ಶ್ರೇಯಾಂಕದ ಆಟಗಾರ್ತಿ ಉನ್ನತಿ ಹೂಡ ಹಾಗೂ ಅನುಭವಿ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಪ್ರಿ–ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ಇಲ್ಲಿನ ಬಾಬು ಬನರಾಸಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಉನ್ನತಿ ಅವರು 21–13, 21–18ರಿಂದ ಸ್ವದೇಶದ ಆಕರ್ಷಿ ಕಶ್ಯಪ್ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಶ್ರೀಕಾಂತ್ 21–13, 21–10ರಿಂದ ಕವೀನ್ ತಂಗಂ ಅವರನ್ನು ನಿರಾಯಾಸವಾಗಿ ಮಣಿಸಿದರು.
2023ರ ವಿಶ್ವ ಬ್ಯಾಡ್ಮಿಂಟನ್ ಕಂಚು ವಿಜೇತ ಪ್ರಣಯ್ ಅವರು 21–15, 21–10ರಿಂದ ಶಾಶ್ವತ್ ದಲಾಲ್ ವಿರುದ್ಧ ಜಯ ಸಾಧಿಸಿದರು. ಅಗ್ರ ಶ್ರೇಯಾಂಕದ ಸಿಂಗಪುರದ ಆಟಗಾರ ತೇ ಅವರು 21–19, 21–17ರಿಂದ ಋತ್ವಿಕ್ ಸಂಜೀವಿ ಅವರನ್ನು ಮಣಿಸಿ, 16ರ ಘಟ್ಟಕ್ಕೆ ಮುನ್ನಡೆದರು.
ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ 21–15, 21–19ರಿಂದ ಅಶ್ಮಿತಾ ಸಿ. ಅವರನ್ನು ಮಣಿಸಿ, ಎರಡನೇ ಸುತ್ತಿಗೆ ಮುನ್ನಡೆದರು. ಕಿರಣ್ ಜಾರ್ಜ್ ಅವರು 21–17, 21–9ರಿಂದ ಇಸ್ರೇಲ್‌ನ ಡೇನಿಲ್ ದುಬುವೆಂಕೊ ವಿರುದ್ಧ ಸುಲಭ ಜಯ ದಾಖಲಿಸಿದರು. ಬೆಂಗಳೂರಿನ ಆಟಗಾರ ಬಿ.ಎಂ. ಭಾರದ್ವಾಜ್ ಅವರು 18–21, 21–16, 23-21ರಿಂದ ತರುಣ್ ರೆಡ್ಡಿ ಕೆ. ಅವರನ್ನು ಮಣಿಸಿದರು.
ಗಾಯತ್ರಿ ಹಾಗೂ ಮಾನಸಾ ರಾವತ್ ಜೋಡಿಯು ಮಹಿಳೆಯರ ಡಬಲ್ಸ್‌ನಲ್ಲಿ 21–11, 21–18ರಿಂದ ಆರತಿ ಸುಹೀಲ್ ಹಾಗೂ ವರ್ಷಿಣಿ ವಿಶ್ವನಾಥ್ ಜೋಡಿಯನ್ನು ಸೋಲಿಸಿತು. ಮಿಶ್ರ ಡಬಲ್ಸ್‌ನಲ್ಲಿ ಸಿ.ಲಾಲ್‌ರಾಮ್‌ಸಂಗಾ ಮತ್ತು ತಾರಿಣಿ ಸೂರಿ ಅವರು 25–23, 21–14ರಿಂದ ಭವ್ಯಾ ಛಬ್ರಾ– ವಿಶಾಖ ಟಿ. ಜೋಡಿಯನ್ನು ಪರಾಭವಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.