ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿ | ಡಿಸೆಂಬರ್‌, ಜನವರಿಯಲ್ಲಿ ನಡೆಸಲು ಸಿದ್ಧ: ಬಿಎಐ

ಪಿಟಿಐ
Published 28 ಏಪ್ರಿಲ್ 2020, 19:30 IST
Last Updated 28 ಏಪ್ರಿಲ್ 2020, 19:30 IST
   

ನವದೆಹಲಿ: ಕೊರೊನಾ ಸೋಂಕು ಹಾವಳಿ ತಗ್ಗಿದಲ್ಲಿ ಮತ್ತು ಸರ್ಕಾರ ಸಮ್ಮತಿ ನೀಡಿದಲ್ಲಿ ಬರುವ ಡಿಸೆಂಬರ್‌ ಅಥವಾ ಜನವರಿಯಲ್ಲಿ ಇಂಡಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯನ್ನು ನಡೆಸಲು ಸಿದ್ಧವಿರುವುದಾಗಿ ಭಾರತ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಎಐ) ತಿಳಿಸಿದೆ.

ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯೂ ಆಗಿರುವ ಇಂಡಿಯನ್‌ ಓಪನ್‌ ಟೂರ್ನಿಯು ₹ 3 ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ.

ಈ ಟೂರ್ನಿಗಾಗಿ ಸಮಯ (ಸ್ಲಾಟ್‌) ಕಾದಿರಿಸುವಂತೆ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಕಳೆದ ವಾರ ಬಿಎಐಗೆ ಪತ್ರ ಬರೆದಿತ್ತು.

ADVERTISEMENT

ಕೊರೊನಾ ವೈರಸ್‌ ಹಾವಳಿ ಎಲ್ಲೆಡೆ ವ್ಯಾಪಿಸಿದ ಕಾರಣ ಈ ಟೂರ್ನಿಯೂ ಸೇರಿದಂತೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತಾ ಕೂಟಗಳೆನಿಸಿದ್ದ ಇತರ ಪ್ರಮುಖ ಟೂರ್ನಿಗಳನ್ನು ಅಮಾನತು ಮಾಡಲಾಗಿತ್ತು.

ಬಿಡಬ್ಲ್ಯುಎಫ್‌ ಪತ್ರಕ್ಕೆ ಉತ್ತರ ನೀಡಿರುವ ಬಿಎಐ, ಡಿಸೆಂಬರ್‌ ಅಥವಾ ಜನವರಿ ತಿಂಗಳಲ್ಲಿ ಈ ಟೂರ್ನಿಯನ್ನು ನಡೆಸಲು ಸಿದ್ಧವಿರುವುದಾಗಿ ತಿಳಿಸಿದೆ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಕೆ.ಸಿಂಘಾನಿಯಾ ಹೇಳಿದ್ದಾರೆ.

‘ಕೊರೊನಾ ಸೋಂಕಿನಿಂದಾಗಿ ಜಾಗತಿಕವಾಗಿ ತಲೆದೋರಿರುವ ಆರೋಗ್ಯ ಬಿಕ್ಕಟ್ಟು ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ ಎಂಬುದರ ಮೇಲೂ ನಮ್ಮ ನಿರ್ಧಾರ ನಿಂತಿದೆ. ಇದರ ಜೊತೆಗೆ ಸರ್ಕಾರದ ಸಮ್ಮತಿಯೂ ಅಗತ್ಯವಿದೆ ಎಂಬುದನ್ನೂ ತಿಳಿಸಿದ್ದೇವೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ನಮಗೆ ಕಳೆದ ವಾರ ಕಳುಹಿಸಿದ ಮೇಲ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಸಬಹುದೇ ಎಂದು ಕೇಳಲಾಗಿತ್ತು. ಆದರೆ ಹಾಲಿ ಅನಿಶ್ಚಿತ ಪರಿಸ್ಥಿತಿ ಅರ್ಥಮಾಡಿಕೊಂಡು ಡಿಸೆಂಬರ್‌ ಅನ್ನು ಮೊದಲ ಆಯ್ಕೆಯಾಗಿ, ಜನವರಿಯನ್ನು ಎರಡನೇ ಆಯ್ಕೆಯಾಗಿ ಬಿಡಬ್ಲ್ಯುಎಫ್‌ ಮುಂದಿಟ್ಟಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ಈ ಬಿಡಬ್ಲ್ಯೂಎಫ್‌ ಸೂಪರ್‌–500 ಟೂರ್ನಿ ಪೂರ್ವನಿಗದಿಯಂತೆ ನವದೆಹಲಿಯಲ್ಲಿ ಮಾರ್ಚ್‌ 24ರಿಂದ 29ರವರೆಗೆ ನಡೆಯಬೇಕಾಗಿತ್ತು.

ಅಮಾನತುಗೊಂಡಿರುವ ಇತರ ಒಲಿಂಪಿಕ್‌ ಅರ್ಹತಾ ಟೂರ್ನಿಗಳಲ್ಲಿ– ಸ್ವಿಸ್‌ ಓಪನ್‌ ಸೂಪರ್‌–300 (ಮಾರ್ಚ್‌ 17 ರಿಂದ 22), ಮಲೇಷಿಯಾ ಓಪನ್ ಸೂಪರ್ 750 ಟೂರ್ನಿ (ಮಾರ್ಚ್‌ 31 ರಿಂದ ಏಪ್ರಿಲ್‌ 5), ಸಿಂಗಪುರ ಓಪನ್‌ ಸೂಪರ್‌ 500 (ಮಾರ್ಚ್‌ 7 ರಿಂದ 12) ಮತ್ತು ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ (ಏಪ್ರಿಲ್‌ 21ರಿಂದ 26)– ಒಳಗೊಂಡಿವೆ.

ಇಂಡೊನೇಷ್ಯಾ ಓಪನ್‌ ಸೂಪರ್‌ 1000, ಜೂನಿಯರ್‌ ಮತ್ತು ಪ್ಯಾರಾ ಬ್ಯಾಡ್ಮಿಂಟನ್‌ ಸ್ಪರ್ಧೆಗಳ ಮೇಲೂ ಕೊರೊನಾ ವಕ್ರದೃಷ್ಟಿ ಬೀರಿದೆ.

ಈ ಅಂಟುರೋಗದಿಂದ ಒಲಿಂಪಿಕ್ಸ್‌ ಕೂಡ ಮುಂದಕ್ಕೆ ಹೋಗಿದ್ದು, ರ‍್ಯಾಂಕಿಂಗ್‌ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಬ್ಯಾಡ್ಮಿಂಟನ್‌ ಟೂರ್ನಿಗಳು ಪುನರಾರಂಭವಾದಾಗ, ಮಾರ್ಚ್‌ 17ರವರೆಗಿನ ಇದ್ದ ರ್‍ಯಾಂಕಿಂಗ್‌ ಅನ್ನು ಶ್ರೇಯಾಂಕಕ್ಕೆ ಆಧಾರವಾಗಿ ಪರಿಗಣಿಸಲು ಬಿಡಬ್ಲ್ಯುಎಫ್‌ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.