ADVERTISEMENT

ಶತಾಯುಷಿ ಅಥ್ಲೀಟ್‌ ಮಾನ್ ಕೌರ್ ಇನ್ನಿಲ್ಲ

ಪಿಟಿಐ
Published 31 ಜುಲೈ 2021, 15:45 IST
Last Updated 31 ಜುಲೈ 2021, 15:45 IST
ಮಾನ್ ಕೌರ್‌
ಮಾನ್ ಕೌರ್‌   

ಚಂಡೀಗಡ: ಇಳಿವಯಸ್ಸಿನಲ್ಲೂ ಉತ್ಸಾಹದ ಬುಗ್ಗೆಯಾಗಿದ್ದ ‘ಚಂಡೀಗಡದ ಅಚ್ಚರಿಯ ಮಹಿಳೆ’ ಶತಾಯುಷಿ ಅಥ್ಲೀಟ್‌ ಮಾನ್ ಕೌರ್ (105) ಹೃದಯಾಘಾತದಿಂದ ಶನಿವಾರ ನಿಧನರಾದರು. ಅವರ ಪುತ್ರ ಗುರುದೇವ್ ಸಿಂಗ್ ಈ ವಿಷಯ ತಿಳಿಸಿದ್ದಾರೆ.

ಅಥ್ಲೀಟ್ ಗುರುದೇವ್ ಸೇರಿದಂತೆ ಕೌರ್ ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

‘ತಾಯಿ ಅವರಿಗೆ ಹೃದಯಾಘಾತವಾಯಿತು. ಸುಮಾರು 1 ಗಂಟೆಯ ವೇಳೆ ಕೊನೆಯುಸಿರೆಳೆದರು‘ ಎಂದು ಗುರುದೇವ್ ಹೇಳಿದ್ದಾರೆ.

ADVERTISEMENT

ಕಳೆದ ಕೆಲವು ತಿಂಗಳುಗಳಿಂದ ಕೌರ್‌ ಅವರ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಅವರನ್ನು ಮೊಹಾಲಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೌರ್‌ 1916ರಲ್ಲಿ ಜನಿಸಿದರು. ಹಿರಿಯ ಪುತ್ರ ಗುರುದೇವ್ ಅವರು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನೋಡಿ ತಮ್ಮ 93ನೇ ವಯಸ್ಸಿನಲ್ಲಿ ಟ್ರ್ಯಾಕ್‌ಗೆ ಇಳಿಯಲಾರಂಭಿಸಿದರು. 2007ರಲ್ಲಿ ಚಂಡೀಗಡದಲ್ಲಿ ನಡೆದ ಹಿರಿಯರ ಅಥ್ಲೆಟಿಕ್ಸ್‌ ಕೂಟದಲ್ಲಿ ಮೊದಲ ಪದಕ ಗೆದ್ದುಕೊಂಡರು.

2017ರಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಹಿರಿಯರ ಕೂಟದ 100 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದು ಕ್ರೀಡಾ ಪ್ರಪಂಚದ ಗಮನ ಸೆಳೆದಿದ್ದರು. ಪೋಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗಗಳಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.