ADVERTISEMENT

ಚೆಸೇಬಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದ ರನ್ನರ್‌ಅಪ್‌

ಪಿಟಿಐ
Published 27 ಮೇ 2022, 13:15 IST
Last Updated 27 ಮೇ 2022, 13:15 IST
ಆರ್‌. ಪ್ರಜ್ಞಾನಂದ– ಪಿಟಿಐ ಚಿತ್ರ
ಆರ್‌. ಪ್ರಜ್ಞಾನಂದ– ಪಿಟಿಐ ಚಿತ್ರ   

ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌. ಪ್ರಜ್ಞಾನಂದ ಅವರು ಮೆಲ್ಟ್‌ವಾಟರ್‌ ಚಾಂಪಿಯನ್ಸ್ ಚೆಸ್‌ ಟೂರ್ ಚೆಸೇಬಲ್‌ ಮಾಸ್ಟರ್ಸ್‌ ಆನ್‌ಲೈನ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದರು.

ಶುಕ್ರವಾರ ಕೊನೆಗೊಂಡ ಫೈನಲ್‌ನಲ್ಲಿ 16 ವರ್ಷದ ಪ್ರಜ್ಞಾನಂದ ಚೀನಾದ ದಿಂಗ್ ಲಿರೆನ್ ವಿರುದ್ಧ ಟೈಬ್ರೇಕ್‌ನಲ್ಲಿ ಸೋಲನುಭವಿಸಿದರು.

ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲ ಸೆಟ್‌ಅನ್ನು 1.5–2.5ರಿಂದ ಕೈಚೆಲ್ಲಿದ್ದ ಪ‍್ರಜ್ಞಾನಂದ, ಎರಡನೇ ಸೆಟ್‌ಅನ್ನು 2.5–1.5ರಿಂದ ತಮ್ಮದಾಗಿಸಿಕೊಂಡು ತಿರುಗೇಟು ನೀಡಿದರು. ಹೀಗಾಗಿ ಫಲಿತಾಂಶ ನಿರ್ಧರಿಸಲು ಟೈಬ್ರೇಕ್ ಮೊರೆಹೋಗಲಾಯಿತು.

ADVERTISEMENT

ಟೈಬ್ರೇಕ್‌ನ ಮೊದಲ ಬ್ಲಿಟ್ಜ್‌ ಗೇಮ್‌ ಡ್ರಾನಲ್ಲಿ ಕೊನೆಗೊಂಡಿತು. ಎರಡನೇ ಗೇಮ್‌ನಲ್ಲಿ ತಮ್ಮ ಅನುಭವವನ್ನು ಒರೆಗೆ ಹಚ್ಚಿದ 29 ವರ್ಷದ ಲಿರೆನ್‌ ಜಯ ಸಾಧಿಸಿದರು. ಅದರೊಂದಿಗೆ ಪಂದ್ಯವನ್ನೂ ಗೆದ್ದರು.

ಪ್ರಜ್ಞಾನಂದ ಟೂರ್ನಿಯುದ್ದಕ್ಕೂ ಅಮೋಘ ಲಯದಲ್ಲಿದ್ದರು. ಪ್ರಿಲಿಮನರಿ ಸುತ್ತಿನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದ್ದರು. ಸೆಮಿಫೈನಲ್‌ನಲ್ಲಿ ನೆದರ್ಲೆಂಡ್ಸ್‌ನ ಅನೀಶ್ ಗಿರಿ ಅವರಿಗೆ ಆಘಾತ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.