ADVERTISEMENT

air rifle: ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌; ಓಜಸ್ವಿ, ಹಿಮಾಂಶುಗೆ ಚಿನ್ನ

ಪಿಟಿಐ
Published 29 ಸೆಪ್ಟೆಂಬರ್ 2025, 14:20 IST
Last Updated 29 ಸೆಪ್ಟೆಂಬರ್ 2025, 14:20 IST
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಹೃದಯಶ್ರೀ (ಬೆಳ್ಳಿ), ಓಜಸ್ವಿ ಠಾಕೂರ್‌ (ಚಿನ್ನ) ಮತ್ತು ಶಾಂಭವಿ ಎಸ್‌. (ಕಂಚು)
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಹೃದಯಶ್ರೀ (ಬೆಳ್ಳಿ), ಓಜಸ್ವಿ ಠಾಕೂರ್‌ (ಚಿನ್ನ) ಮತ್ತು ಶಾಂಭವಿ ಎಸ್‌. (ಕಂಚು)   

ನವದೆಹಲಿ: ಉದಯೋನ್ಮುಖ ಶೂಟರ್‌ ಓಜಸ್ವಿ ಠಾಕೂರ್ ಅವರು ಸೋಮವಾರ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಸ್ಪರ್ಧೆಯ ಮೂರೂ ಪದಕಗಳನ್ನು ಭಾರತ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು.

ಕರ್ಣಿಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ 16 ವರ್ಷದ ಓಜಸ್ವಿ 252.7 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 250.2 ಅಂಕ ಗಳಿಸಿದ ಹೃದಯಶ್ರೀ ಕೊಂಡೂರ್ ಬೆಳ್ಳಿ ಪದಕ ಗೆದ್ದರೆ, ಶಾಂಭವಿ ಕ್ಷೀರಸಾಗರ್ (229.4) ಕಂಚಿನ ಪದಕ ತಮ್ಮದಾಗಿಸಿಕೊಂಡರು. 

ಅರ್ಹತಾ ಸುತ್ತಿನಲ್ಲೇ ಭಾರತದ ಶೂಟರ್‌ಗಳು ಪಾಬಲ್ಯ ಮೆರೆದಿದ್ದರು. ಶಾಂಭವಿ (632.0), ಓಜಸ್ವಿ (631.9) ಮತ್ತು ಹೃದಯಶ್ರೀ (629.6) ಅವರು ಕ್ರಮವಾಗಿ ಮೊದಲ ಮೂರು ಸ್ಥಾನಗಳೊಂದಿಗೆ ಫೈನಲ್‌ಗೆ ಮುನ್ನಡೆದಿದ್ದರು. ಅರ್ಹತಾ ಸುತ್ತಿನಲ್ಲಿ ಎಂಟನೇ ಸ್ಥಾನ ಪಡೆದಿದ್ದ ಕ್ರೊವೇಷ್ಯಾದ ಅನಮರಿಜಾ ಟರ್ಕ್ (206.6) ಅವರು ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು.

ADVERTISEMENT

ಹಿಮಾಂಶುಗೆ ಚಿನ್ನ: ಪುರುಷರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಹಿಮಾಂಶು ಚಿನ್ನಕ್ಕೆ ಗುರಿಯಿಟ್ಟರು. 633.7 ಸ್ಕೋರ್‌ನೊಂದಿಗೆ ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ ಪಡೆದಿದ್ದ ಹಿಮಾಂಶು, ಫೈನಲ್‌ನಲ್ಲಿ (250.9) ಪಾಬಲ್ಯ ಮುಂದುವರಿಸಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಡಿಮಿಟ್ರಿ ಪಿಮೆನೋವ್ (249.9) ಬೆಳ್ಳಿ ಪದಕ ಗೆದ್ದರೆ, ಭಾರತದ ಅಭಿನವ್ ಶಾ (228.4) ಕಂಚಿನ ಪದಕ ಜಯಿಸಿದರು. ಭಾರತದ ಮತ್ತೊಬ್ಬ ಸ್ಪರ್ಧಿ ನರೇನ್ ಪ್ರಣವ್ (187.0) ಐದನೇ ಸ್ಥಾನ ಪಡೆದರು.  

ಪುರುಷರ 25 ಮೀಟರ್ ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಸ್ವತಂತ್ರ ತಟಸ್ಥ ಸ್ಪರ್ಧಿ ಅಲೆಕ್ಸಾಂಡರ್ ಕೊವಾಲೆವ್ ಅವರು ಭಾರತದ ಮುಕೇಶ್ ನೆಲವಲ್ಲಿ ಅವರನ್ನು ರೋಚಕ ಶೂಟ್ ಆಫ್‌ನಲ್ಲಿ ಮಣಿಸಿ ಚಿನ್ನ ಗೆದ್ದರು.

ಕೊವಾಲೆವ್ ಮತ್ತು ಮುಕೇಶ್‌ ಅವರು ಫೈನಲ್‌ ಸುತ್ತಿನಲ್ಲಿ ತಲಾ 27 ಹಿಟ್ಸ್‌ ಗಳಿಸಿದ್ದರು. ಆದರೆ, ಶೂಟ್‌ಆಫ್‌ನಲ್ಲಿ 3-1 ಅಂತರದಿಂದ ಕೊವಾಲೆವ್ ಮೇಲುಗೈ ಸಾಧಿಸಿದರು. ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದ ಮುಕೇಶ್‌ ಅವರು ಬೆಳ್ಳಿ ಪದಕ ಗೆದ್ದರು. ಭಾರತದ ಸೂರಜ್‌ ಶರ್ಮಾ (21 ಹಿಟ್ಸ್‌) ಕಂಚಿನ ಪದಕ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.