ADVERTISEMENT

ಟ್ರೋಫಿ ಮಾರಿ ದೇಣಿಗೆ ನೀಡಿದ ಅರ್ಜುನ

ಪಿಟಿಐ
Published 8 ಏಪ್ರಿಲ್ 2020, 20:00 IST
Last Updated 8 ಏಪ್ರಿಲ್ 2020, 20:00 IST
ಯುವ ಗಾಲ್ಫರ್‌ ಅರ್ಜುನ್‌ ಭಾಟಿ
ಯುವ ಗಾಲ್ಫರ್‌ ಅರ್ಜುನ್‌ ಭಾಟಿ    

ನವದೆಹಲಿ: ವಯಸ್ಸು 15, ಸಂಗ್ರಹಿಸಿದ್ದು ₹ 4.30 ಲಕ್ಷ! ಗ್ರೇಟರ್‌ ನೊಯ್ಡಾದ ಯುವ ಗಾಲ್ಫರ್‌ ಅರ್ಜುನ್‌ ಭಾಟಿ ಕೋವಿಡ್‌–19 ಪಿಡುಗಿನ ವಿರುದ್ಧದ ಸಮರಕ್ಕೆ ನೀಡಿದ ದೇಣಿಗೆಯ ಮೊತ್ತವಿದು. ಅದೂ ತಾನು ಗೆದ್ದ ಎಲ್ಲಾ ಟ್ರೋಫಿಗಳನ್ನು ಮಾರಾಟ ಮಾಡುವ ಮೂಲಕ.

ಮೂರು ವಿಶ್ವ ಜೂನಿಯರ್‌ ಚಾಂಪಿ ಯನ್‌ಷಿಪ್‌ ಹಾಗೂ ಒಂದು ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಟ್ರೋಫಿಗಳು ಇದರಲ್ಲಿ ಸೇರಿವೆ.

2016 ಹಾಗೂ 2018ರಲ್ಲಿ ಯುಎಸ್‌ ಕಿಡ್ಸ್ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ ವಿಜೇತರಾಗಿದ್ದ ಅರ್ಜುನ್‌, ಹೋದ ವರ್ಷ ಎಫ್‌ಸಿಜಿ ಕಾಲ್‌ವೇ ಜೂನಿಯರ್‌ ವಿಶ್ವಚಾಂಪಿ ಯನ್‌ ಆಗಿದ್ದರು. ಪಿಎಂ ಕೇರ್ಸ್ ನಿಧಿಗೆ ಅವರು ಈ ನೆರವು ನೀಡಿದ್ದಾರೆ.

ADVERTISEMENT

ತನ್ನ ಸಂಬಂಧಿಕರು ಹಾಗೂ ಪೋಷಕರ ಮಿತ್ರರಿಗೆ ಈ ಟ್ರೋಫಿಗಳನ್ನು ಮಾರಾಟ ಮಾಡಿದ್ದಾಗಿ ಅರ್ಜುನ್‌ ಹೇಳಿದ್ದಾರೆ.

‘ಕಳೆದ ಎಂಟು ವರ್ಷಗಳಲ್ಲಿ ನಾನು ಗೆದ್ದ 102 ಟ್ರೋಫಿಗಳನ್ನು 102 ಮಂದಿಗೆ ಮಾರಾಟ ಮಾಡಿದ್ದೇನೆ. ಅವರಿಂದ ಪಡೆದ ಹಣವನ್ನು ಇಂದು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದೇನೆ’ ಎಂದು ಅರ್ಜುನ್‌ ಮಂಗಳ ವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ನಾನು ದೇಣಿಗೆ ನೀಡಿದ್ದನ್ನು ತಿಳಿದ ನನ್ನ ಅಜ್ಜಿ ಮೊದಲು ಕಣ್ಣೀರು ಸುರಿಸಿದರು. ಬಳಿಕ ನೀನು ನಿಜವಾದ ಅರ್ಜುನ, ಈ ಹೊತ್ತಿನಲ್ಲಿ ಜನರ ಪ್ರಾಣ ಉಳಿಸುವುದು ಮುಖ್ಯ. ಟ್ರೋಫಿಗಳನ್ನು ಮುಂದೆಯೂ ಗೆಲ್ಲಬಹುದು ಎಂದು ನುಡಿದರು’ ಎಂದು ಅರ್ಜುನ್‌ ಹೇಳಿದ್ದಾರೆ

ಪ್ರಣೀತ್‌ ದೇಣಿಗೆ: ಭಾರತದ ಬ್ಯಾಡ್ಮಿಂಟನ್ ಆಟಗಾರ ಬಿ.ಸಾಯಿ ಪ್ರಣೀತ್‌ ಅವರು ಕೋವಿಡ್‌ನಿಂದ ಬಳಲುತ್ತಿರುವವರಿಗೆ ಸಹಾಯ ಹಸ್ತ ಚಾಚಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಪ್ರಣೀತ್‌, ಬುಧವಾರ ಒಟ್ಟು ₹ 4 ಲಕ್ಷ ದೇಣಿಗೆ ನೀಡಿದ್ದಾರೆ.

ಆನ್‌ಲೈನ್‌ ಚೆಸ್‌ ಮೂಲಕ ದೇಣಿಗೆ: ಗ್ರ್ಯಾಂಡ್‌ಮಾಸ್ಟರ್‌ ಪಿ.ಹರಿಕೃಷ್ಣ ಸೇರಿದಂತೆ ದೇಶದ ಚೆಸ್ ಆಟಗಾರರು ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆನ್‌ಲೈನ್‌ ಟೂರ್ನಿಯ ಮೂಲಕ ₹ 3 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ದೇಣಿಗೆ ನೀಡಿದ ಹಾಕಿ ಇಂಡಿಯಾ

ನವದೆಹಲಿ (‍ಪಿಟಿಐ): ಪಿಎಂ ಕೇರ್ಸ್ ನಿಧಿಗೆ ₹ 1 ಕೋಟಿ ನೀಡಿದ್ದ ಹಾಕಿ ಇಂಡಿಯಾ ಸಂಸ್ಥೆ ಒಡಿಶಾ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಬುಧವಾರ ₹ 21 ಲಕ್ಷ ನೀಡಿದೆ.

‘ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿರುವ ಒಡಿಶಾದಲ್ಲಿ ಪರಿಹಾರ ಕಾರ್ಯ ಗಳಲ್ಲಿ ಕೈಜೋಡಿಸಲು ಹಾಕಿ ಇಂಡಿಯಾ ಬದ್ಧವಾಗಿದೆ. ಹಾಕಿಗೆ ಸದಾ ಪ್ರೋತ್ಸಾಹ ನೀಡುವ ಇಲ್ಲಿನ ಜನರ ನೋವಿಗೆ ಸ್ಪಂದಿಸುವುದಕ್ಕಾಗಿ ಇನ್ನಷ್ಟು ನೆರವು ನೀಡಲು ಸಿದ್ಧ’ ಎಂದು ಎಚ್‌ಐ ಅಧ್ಯಕ್ಷ ಮೊಹಮ್ಮದ್ ಮುಷ್ತಾಕ್ ಅಹಮ್ಮದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.